ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ ಹಿನ್ನೆಲೆ ಬಸ್ ಜಪ್ತಿ

| Published : Jan 24 2025, 12:45 AM IST

ಸಾರಾಂಶ

ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಸಂತ್ರಸ್ತರ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರ ಮೊತ್ತವನ್ನು ಕಳೆದ ಐದು ವರ್ಷದಿಂದ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಇಲ್ಲಿನ ನ್ಯಾಯಾಲಯದ ಸಿಬ್ಬಂದಿ, ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಬಸ್‌ನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಸಂತ್ರಸ್ತರ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರ ಮೊತ್ತವನ್ನು ಕಳೆದ ಐದು ವರ್ಷದಿಂದ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಇಲ್ಲಿನ ನ್ಯಾಯಾಲಯದ ಸಿಬ್ಬಂದಿ, ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಬಸ್‌ನ್ನು ಜಪ್ತಿ ಮಾಡಿದ್ದಾರೆ.

ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ನ್ಯಾಯವಾದಿ ಗೋವಿಂದರಾಜು, ಕವಿತಾ ನೇತೃತ್ವದಲ್ಲಿ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿ ಯಸೂಫ್ ಮಿಯಾ, ರಮೇಶ, ಉಸ್ಮಾನ್, ಸೈಯದ್ ಖಾದರ್, ವೆಂಕಟೇಶ ಇತರರು ಕೊಪ್ಪಳ ಘಟಕಕ್ಕೆ ಸೇರಿದ ಬಸ್‌ನ್ನು ಜಪ್ತಿ ಮಾಡಿಕೊಂಡು ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣ ಏನು?:

2018ರಲ್ಲಿ ಮರಳಿ ಮತ್ತು ಜಂಗಮರ ಕಲ್ಗುಡಿ ಮಧ್ಯೆ ಇರುವ ಟೋಲ್‌ಗೇಟ್ ಸಮೀಪ ನಡೆದಿದ್ದ ರಸ್ತೆ ಅಪಘಾತದಲ್ಲಿ ಜಂಗಮರ ಕಲ್ಗುಡಿ ಗ್ರಾಮದ ಸುರೇಶ ಬಸಪ್ಪ ಹೊಸೂರು (25) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ನರಸಪ್ಪ ಗಿಡ್ಡಪ್ಪ ಮಂಗಳಾಪುರ, ಯಮನೂರಪ್ಪ ಲಿಂಗಪ್ಪ ಬಾಲವಂಚಿ, ಹನುಮಂತ ಕಲ್ಗುಡಿ ಎಂಬವರಿಗೆ ಗಾಯಗಳಾಗಿದ್ದವು. ಮೃತ ಸುರೇಶನ ಕುಟುಂಬಕ್ಕೆ ₹ 45 ಲಕ್ಷ ಹಾಗೂ ನರಸಪ್ಪ ಎಂಬ ಗಾಯಾಳುವಿಗೆ ₹ 10ಲಕ್ಷ ಪಾವತಿಸುವಂತೆ 2019ರಲ್ಲಿ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿತ್ತು. ಇನ್ನುಳಿದ ಗಾಯಾಳುಗಳ ಪ್ರಕರಣವು ವಿಚಾರಣೆಯ ಹಂತದಲ್ಲಿದೆ.

ಆದರೆ ಕಳೆದ ಐದು ವರ್ಷದಿಂದ ಯಾವುದೇ ಪರಿಹಾರ ನೀಡಲು ಸಾರಿಗೆ ಇಲಾಖೆ ಮುಂದಾಗದ ಹಿನ್ನೆಲೆ ನ್ಯಾಯಾಲಯವು, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಯಾವುದೇ ವಾಹನ, ವಸ್ತು ಜಪ್ತಿ ಮಾಡಿಕೊಂಡು ಬರುವಂತೆ ಸಿಬ್ಬಂದಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಸ್‌ನ್ನು ಜಪ್ತಿ ಮಾಡಿದ್ದಾರೆ.

ನಿಗದಿತ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಪರಿಹಾರದ ಮೊತ್ತ ಪಾವತಿಸದೇ ಹೋದಲ್ಲಿ ಜಪ್ತಿ ಮಾಡಿದ ವಾಹನವನ್ನು ನ್ಯಾಯಾಲಯ ಹರಾಜು ಮಾಡಲಿದೆ. ನಿರೀಕ್ಷಿತ ಪರಿಹಾರದ ಮೊತ್ತ ಸಿಗದಿದ್ದಲ್ಲಿ ಬಾಕಿ ಮೊತ್ತಕ್ಕೆ ಮತ್ತೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ನ್ಯಾಯಾಲಯ ಸೂಚಿಸಿದೆ.