ಹಳೆಯ ಗೀತಾಂಜಲಿ ಟಾಕೀಸ್ ಪಕ್ಕದಲ್ಲಿ ಶಾಸಕ ಸತೀಶ್ ಸೈಲ್ ಅವರ 3 ಎಕರೆ ಜಮೀನಿಲ್ಲ. ಅಲ್ಲಿರುವುದು ಕೇವಲ 30 ಗುಂಟೆ ಹಾಗೂ 2 ಗುಂಟೆ ಜಾಗವಷ್ಟೇ.
ಕನ್ನಡಪ್ರಭ ವಾರ್ತೆ ಕಾರವಾರ
ಹಳೆಯ ಗೀತಾಂಜಲಿ ಟಾಕೀಸ್ ಪಕ್ಕದಲ್ಲಿ ಶಾಸಕ ಸತೀಶ್ ಸೈಲ್ ಅವರ 3 ಎಕರೆ ಜಮೀನಿಲ್ಲ. ಅಲ್ಲಿರುವುದು ಕೇವಲ 30 ಗುಂಟೆ ಹಾಗೂ 2 ಗುಂಟೆ ಜಾಗವಷ್ಟೇ. ತಮ್ಮ ಜಾಗಕ್ಕೆ ದಾರಿ ಮಾಡಿಕೊಳ್ಳಲು ಬಸ್ ನಿಲ್ದಾಣ ಸ್ಥಳಾಂತರಿಸುತ್ತಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು ಎಂದು ಕೆಪಿಸಿಸಿ ವಕ್ತಾರ ಕೆ. ಶಂಭು ಶೆಟ್ಟಿ ತಿಳಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದರು.
ಫುಟ್‌ಪಾತ್ ಮೇಲೆ ಬಸ್ ನಿಲ್ದಾಣ ನಿರ್ಮಿಸುತ್ತಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಗರದ ಡಿಸಿ ಕಚೇರಿ ಎದುರು, ಬಿಣಗಾ, ಅವರ್ಸಾ ಸೇರಿದಂತೆ ಹಲವೆಡೆ ಫುಟ್‌ಪಾತ್ ಮೇಲೆಯೇ ಬಸ್ ಸ್ಟಾಪ್ ನಿರ್ಮಿಸಲಾಗಿದೆ. ಹಿಂದೂ ಹೈಸ್ಕೂಲ್ ಬಳಿಯೂ ಈ ಹಿಂದೆ ಬಸ್ ಸ್ಟಾಪ್ ಇತ್ತು. ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮಿತ್ರ ಸಮಾಜ, ನಗರಸಭೆ ಸೇರಿದಂತೆ ಹಲವೆಡೆ ನೂತನ ಬಸ್ ತಂಗುದಾಣ ನಿರ್ಮಿಸುವ ಚಿಂತನೆ ಶಾಸಕರದ್ದಾಗಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಕ್ಕೆ ತಿರುಗೇಟು ನೀಡಿದರು.ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶಾಸಕ ಸತೀಶ್ ಸೈಲ್ ಪ್ರಯತ್ನದಿಂದ ಎಂಆರ್ ಐ ಮಶೀನ್ ಬಂದಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲಗುಟಕರ್, ಪ್ರಮುಖರಾದ ಬಾಬು ಶೇಖ್, ನೂತನ ಜೈನ್ ಮತ್ತಿತರರು ಇದ್ದರು.ಮೈಸೂರು ಮಹಾರಾಜರ ಉದಾಹರಣೆ
ಮೈಸೂರು ಮಹಾರಾಜರು ಮೈಸೂರಿನಾದ್ಯಂತ ಹಲವೆಡೆ ಆಸ್ತಿ ಹೊಂದಿದ್ದಾರೆ. ಈಗಿನ ಮಹಾರಾಜರು ಸಂಸದರಾಗಿದ್ದು, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿದರೂ ಅದರ ಸುತ್ತಮುತ್ತ ಅವರ ಆಸ್ತಿ ಇರಬಹುದು. ಹಾಗಂತ ತಮ್ಮ ಆಸ್ತಿಗೆ ಅನುಕೂಲ ಮಾಡಿಕೊಳ್ಳಲು ಅಭಿವೃದ್ಧಿ ಮಾಡುತ್ತಿದ್ದಾರೆ ಎನ್ನಲಾಗುತ್ತದೆಯೇ? ಶಾಸಕ ಸತೀಶ್ ಸೈಲ್ ₹700-800 ಕೋಟಿ ವಹಿವಾಟು ನಡೆಸುವ ಉದ್ಯಮಿ. ತಮ್ಮ ದುಡಿಮೆಯ ಹಣದಲ್ಲಿ ಹಲವೆಡೆ ಆಸ್ತಿ ಖರೀದಿಸಿದ್ದಾರೆ. ಬಸ್ ಸ್ಟಾಪ್ ಸ್ಥಳಾಂತರವನ್ನು ಅವರ ಆಸ್ತಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.