ಸಾರಾಂಶ
ಮುಂಡರಗಿ: ವೇತನ ಹಿಂಬಾಕಿ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಯಿಂದ ಮಂಗಳವಾರ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ್ ನಡೆಸಿದ್ದು, ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರು ಬಸ್ ಸಂಚಾರ ಇಲ್ಲದೇ ನಿಲ್ದಾಣದಲ್ಲಿ ಪರದಾಡಿದ್ದು ಕಂಡು ಬಂದಿತು. ನ್ಯಾಯಾಲಯದ ಆದೇಶದ ಪ್ರಕಾರ ಸಂಜೆ ಬಸ್ ಸೇವೆ ಪ್ರಾರಂಭವಾಯಿತು.
ಬಸ್ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಎಂದಿನಂತೆ ಮಂಗಳವಾರ ಬೆಳಗ್ಗೆ ಹಿಂದಿನ ದಿನ ರಾತ್ರಿ ಗ್ರಾಮೀಣ ಪ್ರದೇಶಗಳಿಗೆ ತೆರಳಿದ ಬಸ್ಸಿಗೆ ಬೆಳಗ್ಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಅಲ್ಲದೇ ತಾಲೂಕು ಸ್ಥಳದಿಂದ ಶಹರಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳೂ ಸೇರಿದಂತ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಕರ್ತವ್ಯಕ್ಕೆ ತೆರಳಲು ಪರದಾಡಿದ್ದು ಕಂಡು ಬಂದಿತು.ಮುಷ್ಕರದ ಬಗ್ಗೆ ತಿಳಿಯದೇ ಅನೇಕರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದು ಕಂಡು ಬಂದಿತು. ನಂತರ ಅಲ್ಲಿನ ಸಿಬ್ಬಂದಿ ಬಸ್ ಮುಷ್ಕರದ ಕುರಿತು ವಿಷಯ ತಿಳಿಸಿದಾಗಿ ಖಾಸಗಿ ವಾಹನಗಳಲ್ಲಿ ತಮ್ಮ ಗ್ರಾಮಗಳಿಗೆ ತೆರಳಿದರು.
ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಖಾಸಗಿ ವಾಹನಗಳು ಗದಗ, ಕೊಪ್ಪಳ, ಶಿರಹಟ್ಟಿ, ಲಕ್ಷ್ಮೇಶ್ವರ, ಹೂವಿನ ಹಡಗಲಿ, ಡಾವಣಗೇರಿಗಳಿಗೆ ತೆರಳಿದ್ದು ಕಂಡು ಬಂದಿತು. ಬಸ್ ನಿಲ್ದಾಣದ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಸಿಬ್ಬಂದಿ ಬಸ್ ನಿಲ್ದಾಣದ ಒಳಗೆ ಮತ್ತು ಹೊರಗೆ ಬಿಗಿ ಬಂದೋಬಸ್ತ್ ನಡೆಸಿದ್ದು ಕಂಡು ಬಂದಿತು.ನಾವು ಎಂದಿನಂತೆ ಘಟಕದಲ್ಲಿ ಬಸ್ಸುಗಳು ರಸ್ತೆಗಿಳಿಯಲು ಬೇಕಾದ ಎಲ್ಲ ತಯಾರಿ ಮಾಡಿದ್ದು ನಮ್ಮ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಇರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸಂಜೆ ಮತ್ತೆ ಸಂಚಾರ ಪ್ರಾರಂಭಗೊಂಡಿದೆ ಎಂದು ಮುಂಡರಗಿ ಘಟಕ ವ್ಯವಸ್ಥಾಪಕ ಶೇಖರ್ ನಾಯಕ ಹೇಳಿದರು.
ನಮಗ್ ಬಸ್ ಬಂದ್ ಇರೂದು ಮೊದ್ಲ ಗೊತ್ತಿರಲಿಲ್ಲ. ಮಕ್ಕಳ ಕರಕೊಂಡು ಶಿರಹಟ್ಟಿ ತಾಲೂಕಿನಿಂದ ಬಂದೀವಿ. ಇದೀಗ ಹೂವಿನ ಹಡಗಲಿಗೆ ಹೋಗಬೇಕು. ಬೆಳಗ್ಗೆಯಿಂದ ಕಾಯಾಕತ್ತೀವೆ. ಆದ್ರ ಬಸ್ ಇಲ್ಲಾ ಎಂದು ಹೂವಿನ ಹಡಗಲಿ ಭಾಗದ ಪ್ರಯಾಣಿಕರಾದ ಜಿ. ರೇಣುಕಮ್ಮ ಕನ್ನಡಪ್ರಭಕ್ಕೆ ತಿಳಿಸಿದರು.ಹೈಕೋರ್ಟ್ ಕೆಎಸ್ಆರ್ಟಿಸಿ ನೌಕರರಿಗೆ ತಕ್ಷಣವೇ ಮುಷ್ಕರ ನಿಲ್ಲಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಮತ್ತು ಬಸ್ ಸಂಚಾರ ಪ್ರಾರಂಭಗೊಂಡಿತು. ಬೆಳಗ್ಗೆ ಬಸ್ಸಿಗಾಗಿ ಕಾದು ಸುಸ್ತಾಗಿದ್ದ ಪ್ರಯಾಣಿಕರು ಸಂಜೆ ನೆಮ್ಮದಿಯಿಂದ ಬಸ್ ಏರಿ ಹೊರಟಿದ್ದು ಕಂಡು ಬಂದಿತು.