ಸಾರಾಂಶ
ಸಾರಿಗೆ ಇಲಾಖೆ ನಷ್ಟದಲ್ಲಿದೆ. ಡಿಸೇಲ್, ಬಿಡಿ ಭಾಗಗಳ ದರ ಹೆಚ್ಚಳ ಆಗಿರುವುದರಿಂದ ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದರು.
ಕಾಗವಾಡ; ಸಾರಿಗೆ ಇಲಾಖೆ ನಷ್ಟದಲ್ಲಿದೆ. ಡಿಸೇಲ್, ಬಿಡಿ ಭಾಗಗಳ ದರ ಹೆಚ್ಚಳ ಆಗಿರುವುದರಿಂದ ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕರರ ಸಂಬಳ, ಡಿಸೇಲ್ ವಾಹನಗಳ ಬಿಡಿಭಾಗಗಳ ದರ ಹೆಚ್ಚಳ ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಳವಾಗಿದೆ. 4 ವರ್ಷಗಳಿಂದ ಬಸ್ ಟಿಕೆಟ್ ದರ ಹೆಚ್ಚಳವಾಗಿಲ್ಲ, ದರ ಹೆಚ್ಚಳ ಮಾಡುವುದರ ಬಗ್ಗೆ ಚಿಂತನೆ ನಡೆದಿದೆ. ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದರು.
ಶಕ್ತಿ ಯೋಜನೆಯಿಂದ ಆದಾಯ ಬರುತ್ತಿದೆ. 400 ಹೊಸ ಬಸ್ ಗಳನ್ನು ಖರೀದಿಸಲಾಗಿದೆ. ಹಳೆಯ ಬಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಹಳೆಯ ಬಸ್ ಗಳನ್ನು ಈಗಾಗಲೇ ಕಾಗವಾಡದ ಜ್ಯೋತಿಕುಮಾರ ಪಾಟೀಲರ ಶಾಲೆ, ಕಕಮರಿ ಸ್ವಾಮೀಜಿ, ಬಾಗಲಕೋಟ ತಲಾ ಒಂದು ಹೀಗೆ ಹಳೆಯ ಬಸ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ. ಈಗ ಹೊಸದಾಗಿ 10 ಬಸ್‌ಗಳು ಬಂದಿವೆ, ಅವುಗಳ ಟೆಸ್ಟಿಂಗ್ ನಡೆದಿದೆ, ಬರುವ ಒಂದು ವಾರದಲ್ಲಿ 400 ಬಸ್‌ಗಳು ವಾಯುವ್ಯ ಕರ್ನಾಟಕಕ್ಕೆ ಬರಲಿವೆ. ಅವು ಬಂದ ಮೇಲೆ ಅಥಣಿ, ಕಾಗವಾಡ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ ಹೀಗೆ ಅವಶ್ಯಕತೆಗೆ ಅನುಗುಣವಾಗಿ ಹಂಚಿಕೆ ಮಾಡಿ ಪ್ರಯಾಣಿಕರಿಗೆ ಅನುವು ಮಾಡಿ ಕೊಡುವುದಾಗಿ ತಿಳಿಸಿದರು.
ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯರಾದ ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಬಿರಡಿ, ಮುಖಂಡರಾದ ಡಾ.ಅರವಿಂದರಾವ್ ಕಾರ್ಚಿ, ರಾಜು ಮದನೆ, ರಾಜು ಅರ್ಜುನವಾಡ ಇತರರು ಇದ್ದರು.