ಮೇಲ್ಸೇತುವೆಯಲ್ಲಿ ಬಸ್‌ ಟೈಯರ್‌ಸ್ಫೋಟ: ಕೀ.ಮೀಗಟ್ಟಲೇ ಟ್ರಾಫಿಕ್‌

| Published : Sep 11 2024, 01:11 AM IST

ಸಾರಾಂಶ

ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆಯಲ್ಲಿ ಟೈಯರ್‌ ಸ್ಫೋಟಗೊಂಡು ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆಯಲ್ಲಿ ಟೈಯರ್‌ ಸ್ಫೋಟಗೊಂಡು ರಸ್ತೆ ಮಧ್ಯೆ ಖಾಸಗಿ ಬಸ್‌ ನಿಂತಿದ್ದರಿಂದ ಟೌನ್‌ ಹಾಲ್‌, ಕಾರ್ಪೊರೇಷನ್‌ ವೃತ್ತ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಕೆಲ ಕಾಲ ಪರದಾಡಿದರು.

ಸಿಟಿ ಮಾರ್ಕೆಟ್‌ ಕಡೆಯಿಂದ ಮೈಸೂರು ಕಡೆಗೆ ತೆರಳುವ ಮಾರ್ಗದ ಬಿಜಿಎಸ್‌ ಮೇಲ್ಸೇತುವೆಯಲ್ಲಿ ಮಂಗಳವಾರ ಸಂಜೆ ಸುಮಾರು ಆರು ಗಂಟೆಗೆ ಖಾಸಗಿ ಬಸ್‌ವೊಂದರ ಟೈರ್‌ ಸ್ಫೋಟಗೊಂಡು ಬಸ್‌ ರಸ್ತೆ ಮಧ್ಯೆಯೇ ನಿಂತಿತು. ಇದರಿಂದ ಮೇಲ್ಸೇತುವೆ, ಟೌನ್‌ಹಾಲ್‌, ಕಾರ್ಪೊರೇಷನ್‌ ವೃತ್ತ, ಜೆ.ಸಿ.ರಸ್ತೆ, ಕೆಂಪೇಗೌಡ ರಸ್ತೆ, ಮೈಸೂರು ಬ್ಯಾಂಕ್‌ ಸರ್ಕಲ್‌ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಕಿಲೋ ಮೀಟರ್‌ನಷ್ಟು ಉದ್ದಕ್ಕೆ ವಾಹನ ಸಂಚಾರ ದಟ್ಟಣೆ ಉಂಟಾಯಿತು.

ಇದೇ ಸಮಯಕ್ಕೆ ಮಳೆ ಶುರುವಾಗಿದ್ದರಿಂದ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ದ್ವಿಚಕ್ರ ವಾಹನ ಸವಾರರು ಹಿಂದಕ್ಕೂ ಹೋಗಲಾಗದೇ ಮುಂದಕ್ಕೂ ಚಲಿಸಲಾಗದೆ ನಡು ರಸ್ತೆಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸಂಚಾರ ಪೊಲೀಸರು ತಕ್ಷಣ ಮೇಲ್ಸೇತುವೆಗೆ ತೆರಳಿ ಪರಿಶೀಲನೆ ನಡೆಸಿದರು. ಬಸ್‌ನ ಟೈಯರ್‌ ಸ್ಫೋಟಗೊಂಡಿದ್ದರಿಂದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಸೂಚಿಸಿದರು. ಬಳಿಕ ಜೆಸಿಬಿ ಸಹಾಯದಿಂದ ಖಾಸಗಿ ಬಸ್ಸನ್ನು ಮೇಲ್ಸೇತುವೆಯಿಂದ ಎಳೆದೊಯ್ದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.