ಸಾರಾಂಶ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭಾನುವಾರ ಗ್ರಾಮೀಣ ಪ್ರದೇಶಕ್ಕೆ ತೆರಳುವ ಬಸ್‌ಗಳು ಎರಡು ಗಂಟೆಗೂ ಅಧಿಕ ಸಮಯ ವಿಳಂಬವಾಗಿದ್ದರಿಂದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭಾನುವಾರ ಗ್ರಾಮೀಣ ಪ್ರದೇಶಕ್ಕೆ ತೆರಳುವ ಬಸ್‌ಗಳು ಎರಡು ಗಂಟೆಗೂ ಅಧಿಕ ಸಮಯ ವಿಳಂಬವಾಗಿದ್ದರಿಂದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು.ರಾಜ್ಯ ಸರ್ಕಾರ ಭಾನುವಾರದಿಂದ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಿನ ಆದೇಶ ಮಾಡಿದೆ. ಅದರಂತೆ ಶನಿವಾರ ರಾತ್ರಿ ಗ್ರಾಮೀಣ ಪ್ರದೇಶಗಳಿಗೆ ಹೊರಡಬೇಕಿದ್ದ ಬಸ್‌ಗಳ ಟಿಕೆಟ್ ನೀಡುವ ಮಷಿನ್‌ಗಳಿಗೆ ಪರಿಸ್ಕೃತ ದರ ಹಂತವಾರು ಸೇರ್ಪಡೆ ಮಾಡಲು ತಡವಾಗಿದ್ದರಿಂದ ಬೆಳಗ್ಗೆ ೭ ಗಂಟೆಗೆ ಹೊರಡಬೇಕಿದ್ದ ಬಸ್‌ಗಳು 9 ಗಂಟೆಯಾದರೂ ಬಸ್ ನಿಲ್ದಾಣದಾಚೆ ಹೋಗಲಿಲ್ಲ. ಕಾದು ಕಾದು ಸುಸ್ತಾದ ಅನೇಕ ಪ್ರಯಾಣಿಕರು ಸಾರಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ಮರಳಿ ಮನೆಯ ಹಾದಿ ಹಿಡಿಯಬೇಕಾಯಿತು.
ಬಸ್ ವಿಳಂಬವಾಗಿದ್ದಕ್ಕೆ ಹಳ್ಳಿಗಳಿಗೆ ಹೋಗಬೇಕಿದ್ದ ದಿನಪತ್ರಿಕೆಗಳ ಬಂಡಲ್ ಸಹ ಬಸ್ ನಿಲ್ದಾಣದಲ್ಲೇ ಉಳಿದವು. ವಿಕೆಂಡ್ ಎಂದು ತಮ್ಮ ಗ್ರಾಮಗಳಿಗೆ ಮತ್ತು ಸಂಬಂಧಿಕರ ಊರು, ಆಸ್ಪತ್ರೆಗ ಹೊರಟಿದ್ದ ಪ್ರಯಾಣಿಕರು ಬಸ್ ವಿಳಂಬದಿಂದ ಪ್ರಯಾಣಿಸಲಾಗದೇ ತೊಂದರೆ ಅನುಭವಿಸಿದರು. ಅಂದೇ ದುಡಿದು ಸಂಸಾರ ಸಾಗಿಸುವ ಸಣ್ಣ ವ್ಯಾಪಾರಿಗಳ ಪಾಲಿಂಗತೂ ಭಾನುವಾರ ಕರಾಳ ದಿನವಾಯಿತು.ರಾಮದುರ್ಗ ಘಟಕದಲ್ಲಿ ೯೮ ಮಾರ್ಗಗಳಿಗೆ ಬಸ್ ಬಿಡಲಾಗುತ್ತಿದೆ. ಶನಿವಾರ ರಾತ್ರಿ 12 ಗಂಟೆಯಿಂದ ಪರಿಷ್ಕೃತ ದರದ ಟಿಕೆಟ್ ವಿತರಿಸಲು ಯಂತ್ರಗಳಲ್ಲಿ ಸರಿ ಮಾಡಲು ಪ್ರಯತ್ನಿಸಲಾಗುತ್ತಿದೆ, ಸ್ವಲ್ಪ ವಿಳಂಭವಾದ ಪರಿಣಾಮ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕೂಡಲೇ ಸರಿಪಡಿಸಿ ಪ್ರಯಾಣಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು.- ಎಚ್. ಆರ್. ಪಾಟೀಲ, ಘಟಕ ವ್ಯವಸ್ಥಾಪಕರು ರಾಮದುರ್ಗ