ರಸ್ತೆಗಿಳಿಯದ ಬಸ್‌, ಪ್ರಯಾಣಿಕರ ಪರದಾಟ

| Published : Aug 05 2025, 11:46 PM IST

ಸಾರಾಂಶ

ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕಾರಟಗಿ ಸೇರಿದಂತೆ ತಾಲೂಕು ಕೇಂದ್ರ ಹಾಗೂ ಹೋಬಳಿಗಳಲ್ಲಿಯೂ ಬಸ್‌ಗಳು ಕಾರ್ಯಾಚರಣೆ ನಡೆಸಲಿಲ್ಲ. ಜಿಲ್ಲೆಯಲ್ಲಿ 474 ಬಸ್‌ ಕಾರ್ಯಾಚರಣೆ ನಡೆಸಬೇಕಿದ್ದರೂ ನಾಲ್ಕಾರು ಬಸ್‌ಗಳು ಮಾತ್ರ ರಸ್ತೆಗಿಳಿದವು. ಉಳಿದ ಬಸ್‌ಗಳು ಡಿಪೋದಲ್ಲಿಯೇ ಇದ್ದವು.

ಕೊಪ್ಪಳ:

ವೇತನ ಪರಿಷ್ಕರಣೆ ಮತ್ತು ಪೂರ್ವಾನ್ವಯ ಹೆಚ್ಚಳದ ವೇತನ ನೀಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಹೀಗಾಗಿ ಪ್ರಯಾಣಿಕರು ಅನ್ಯ ಊರುಗಳತ್ತ ತೆರಳಲು ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು.

ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕಾರಟಗಿ ಸೇರಿದಂತೆ ತಾಲೂಕು ಕೇಂದ್ರ ಹಾಗೂ ಹೋಬಳಿಗಳಲ್ಲಿಯೂ ಬಸ್‌ಗಳು ಕಾರ್ಯಾಚರಣೆ ನಡೆಸಲಿಲ್ಲ. ಜಿಲ್ಲೆಯಲ್ಲಿ 474 ಬಸ್‌ ಕಾರ್ಯಾಚರಣೆ ನಡೆಸಬೇಕಿದ್ದರೂ ನಾಲ್ಕಾರು ಬಸ್‌ಗಳು ಮಾತ್ರ ರಸ್ತೆಗಿಳಿದವು. ಉಳಿದ ಬಸ್‌ಗಳು ಡಿಪೋದಲ್ಲಿಯೇ ಇದ್ದವು.

ಬೇಡಿಕೆ ಈಡೇರಿಸುವ ವರೆಗೂ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು ಪಟ್ಟು ಹಿಡಿದಿದ್ದ ಸಿಬ್ಬಂದಿಯನ್ನು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ ಕರ್ತವ್ಯಕ್ಕೆ ಬರಲಿಲ್ಲ. ಖಾಸಗಿ ಚಾಲಕರನ್ನು ಇಟ್ಟುಕೊಂಡು ಬಸ್‌ ಓಡಿಸಲು ಅಧಿಕಾರಿಗಳು ನಡೆಸಿದ ಪ್ರಯತ್ನವು ಫಲ ಕೊಡಲಿಲ್ಲ. ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಬಳಗೆ ಬಂದ ವಾಹನಗಳು ಪ್ರಯಾಣಿಕರನ್ನು ಕರೆದುಕೊಂಡು ಹೋದವು. ಆದರೆ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವಾಹನಗಳು ಇಲ್ಲದ ಪರಿಣಾಮ ಪರದಾಡಬೇಕಾಯಿತು.

ಪರೀಕ್ಷೆ ಮುಂದೂಡಿಕೆ:

ಬಸ್‌ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ನಿರೀಕ್ಷೆ ಸಂಖ್ಯೆಯ ವಿದ್ಯಾರ್ಥಿಗಳು ಬಾರದ ಹಿನ್ನೆಲೆಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯವು ಕೊನೆಯ ಕ್ಷಣದಲ್ಲಿ

ತನ್ನ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿತು. ಇದರಿಂದ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳು ಮರಳಿ ಹೋಗಲು ಸಹ ಸಮಸ್ಯೆಯಾಯಿತು.

ಹರಸಾಹಸ:

ಕರ್ತವ್ಯಕ್ಕೆ ಹಾಜರಾಗದೆ ಬಸ್‌ ನಿಲ್ದಾಣದಲ್ಲಿ ಓಡಾಡುತ್ತಿದ್ದ ಸಿಬ್ಬಂದಿಯನ್ನು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರು ಸ್ಪಂದಿಸಲಿಲ್ಲ. ನಮ್ಮ ಸಂಘಟನೆ ರಾಜ್ಯ ಪದಾಧಿಕಾರಿಗಳ ಮಾಹಿತಿ ಬರುವವರೆಗೂ ನಾವು ಕರ್ತವ್ಯಕ್ಕೆ ಬರುವುದಿಲ್ಲ ಎಂದು ಹೇಳಿದರು. ನಿತ್ಯ ಸಿಬ್ಬಂದಿಯನ್ನು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ಮಂಗಳವಾರ ಚಳ್ಳೇಹಣ್ಣು ತಿನ್ನಿಸಿದರು.ನಮಗೆ ಅನ್ಯಾಯ:

ನಮಗೆ ಹತ್ತು ವರ್ಷದಿಂದ ಅನ್ಯಾಯವಾಗುತ್ತಿದ್ದು ಸರಿಪಡಿಸಿ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹೀಗಾಗಿ ಬಾರಿ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ನಮ್ಮನ್ನು ಕೆಲಸದಿಂದ ಕಿತ್ತಾಕಿದರೂ ಪರವಾಗಿಲ್ಲ. ನಾವು ಮುಷ್ಕರ ಮುಂದುವರಿಸುತ್ತೇವೆಂದು ಸಾರಿಗೆ ಸಿಬ್ಬಂದಿ ಹೇಳಿದರು. ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತಲು ಇದ್ದ ನೌಕರರು ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಈಗ ಆದೇಶ ಹೊರಡಿಸಲಿದೆ, ನಮ್ಮ ಪರವಾಗಿ ಆದೇಶ ಬರುತ್ತದೆ ಎಂದು ಕಾಯುತ್ತಾ ಇದ್ದರು.