ಸಾರಾಂಶ
ಕುಂದಾಪುರ ಕೆಎಸ್ಸಾರ್ಟೀಸಿ ಡಿಪೋದಲ್ಲಿ 45ಕ್ಕೂ ಅಧಿಕ ಮಂಜೂರಾದ ಚಾಲಕ ಹುದ್ದೆ ಇದ್ದರೂ ಒಂದು ಭರ್ತಿ ಮಾಡಿಕೊಂಡಿಲ್ಲ. ಬಸ್ ಕೂಡ ಓಡಾಡುತ್ತಿಲ್ಲ, ಡ್ರೈವರ್, ಕಂಡಕ್ಟರ್ ಗಳ ನೇಮಕಾತಿಯೂ ಮಾಡುತ್ತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ ಎಂದು ಶಾಸಕ ಗಂಟಿಹೊಳೆ ಗಮನ ಸೆಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೈಂದೂರು
ಕುಂದಾಪುರ ಕೆ.ಎಸ್.ಆರ್. ಟಿ.ಸಿ. ಡಿಪೋದಲ್ಲಿ 16 ಬಸ್ ಗಳು ಚಾಲಕರ ಕೊರತೆಯಿಂದ ಓಡಾಟವನ್ನೇ ಮಾಡುತ್ತಿಲ್ಲ. ದಿವಾಳಿ ರಾಜ್ಯ ಸರ್ಕಾರಕ್ಕೆ ಇದಕ್ಕಿಂತ ಇನ್ನೇನು ನಿದರ್ಶನ ಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಪ್ರಶ್ನಿಸಿದ್ದಾರೆ.ಕುಂದಾಪುರ ಡಿಪೋ ಒಂದರಲ್ಲಿ ಚಾಲಕರ ಕೊರತೆಯಿಂದ 16 ಬಸ್ ಓಡಾಟ ಮಾಡುತ್ತಿಲ್ಲ ಎಂದಾದರೆ ರಾಜ್ಯದ ಉಳಿದ ಪರಿಸ್ಥಿತಿ ಹೇಗಿರಬಹುದು ? ಸಾರಿಗೆ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಬಸ್ ಡ್ರೈವರ್ ನೇಮಕಾತಿ ಮಾಡಬೇಕು. ಕುಂದಾಪುರ ಡಿಪೋದಲ್ಲಿ 45ಕ್ಕೂ ಅಧಿಕ ಮಂಜೂರಾದ ಚಾಲಕ ಹುದ್ದೆ ಇದ್ದರೂ ಒಂದು ಭರ್ತಿ ಮಾಡಿಕೊಂಡಿಲ್ಲ. ಬಸ್ ಕೂಡ ಓಡಾಡುತ್ತಿಲ್ಲ, ಡ್ರೈವರ್, ಕಂಡಕ್ಟರ್ ಗಳ ನೇಮಕಾತಿಯೂ ಮಾಡುತ್ತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಸರ್ಕಾರ ತುರ್ತಾಗಿ ಎಚ್ಚೆತ್ತುಕೊಂಡು ಆದಷ್ಟು ಬೇಗ ಹುದ್ದೆ ಭರ್ತಿ ಮಾಡಿ ಬಸ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕುಂದಾಪುರದಿಂದ ಬೆಂಗಳೂರು, ಧರ್ಮಸ್ಥಳ ಸೇರಿದಂತೆ ವಿವಿಧ ಭಾಗಕ್ಕೆ ಓಡಾಟಕ್ಕೆ ಬಸ್ ಕೊರತೆ ಎದ್ದು ಕಾಣುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಕೂಡಲೇ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.