ಸಾರಾಂಶ
ಕೊಪ್ಪಳ: ನಮ್ಮಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಉದ್ಯಮ ಬೆಳವಣಿಗೆಯಾಗಬೇಕಾದ ಅವಶ್ಯಕತೆಯಿದ್ದು, ಅದಕ್ಕಾಗಿ ಉದ್ಯಮ ಪ್ರಾರಂಭಿಸುವವರಿಗೆ ವಿವಿಧ ಇಲಾಖೆಗಳಿಂದ ಅಗತ್ಯ ಸಹಕಾರ ಸಿಗುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.
ಅವರು ಗುರುವಾರ ಕೊಪ್ಪಳ ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಫಾರ್ಚೂನ್ ಹೊಟೇಲ್‌ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಂಎಸ್ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ ರ‍್ಯಾಂಪ್ ಯೋಜನೆಯಡಿ ಝಡ್.ಇ.ಡಿ-ಲೀನ್ ಯೋಜನೆ ಕುರಿತು ಒಂದು ದಿನದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 13.89ಲಕ್ಷ ಜನ ಇದ್ದು, ಪ್ರಸ್ತುತ ಅಂದಾಜು 17 ಲಕ್ಷ 15 ಸಾವಿರ ಜನ ಇದ್ದಾರೆ. ಅದರಲ್ಲಿ ಉದ್ಯಮ ಸರ್ಟಿಫಿಕೇಟ್‌ಗೆ ನೋಂದಣಿ ಮಾಡಿಕೊಂಡವರು ಕೇವಲ 4000 ಜನ ಮಾತ್ರ. ಎಂಎಸ್ಎಂಇಯಲ್ಲಿ ಸಹಾಯಧನ ತೆಗೆದುಕೊಂಡವರ ಸಂಖ್ಯೆ ಬಹಳ ಕಡಿಮೆಯಿದೆ. ಕಾಯಕವೇ ಕೈಲಾಸ ಎನ್ನುವುದನ್ನು ನಂಬಿರುವ ಶ್ರಮ ಸಂಸ್ಕಾರ ಹೊಂದಿರುವ ಈ ಭಾಗದ ಜನರು ಸರ್ಕಾರದ ಎಲ್ಲ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಅವುಗಳ ಸದುಪಯೋಗ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು. ಮೈಕ್ರೋ ಸ್ಮಾಲ್ & ಮೀಡಿಯಂ ಎಂಟರ್ ಪ್ರೈಸಸ್ (ಎಂ.ಎಸ್.ಎಂ.ಇ.) ಯಿಂದ ಸಮಾನ್ಯ ವರ್ಗದವರಿಗೆ ಶೇ. 25 ರಷ್ಟು ಹಾಗೂ ಅಲ್ಪಸಂಖ್ಯಾತರು, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮಹಿಳೆಯರಿಗೆ ಶೇ.35 ರಷ್ಟು ಸಬ್ಸಿಡಿ ಸಾಲ ಸಿಗುತ್ತದೆ.ಇದರ ಕುರಿತು ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು. ಇಂತಹ ಸರ್ಕಾರಿ ಸೌಲಭ್ಯ ಬಳಸಿಕೊಂಡು ಎಲ್ಲರೂ ಸಣ್ಣ ಉದ್ಯಮ ಪ್ರಾರಂಭಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮನ್ಸೂರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಶಿಯನ್ ಕಾಸಿಯಾ ಉಪಾಧ್ಯಕ್ಷ ಲಿಂಗಣ್ಣ ಎಸ್. ಬಿರಾದಾರ, ಕಾಸಿಯಾ ಜಂಟಿ ಕಾರ್ಯದರ್ಶಿ (ನಗರ) ಕೇಶವ ಮೂರ್ತಿ ಆರ್., ಕಾಸಿಯಾ ಜಂಟಿ ಕಾರ್ಯದರ್ಶಿ (ಗ್ರಾಮೀಣ) ದಿನೇಶ್ ಕುಮಾರ, ಕೊಪ್ಪಳ ಜಿಲ್ಲಾ ಕಾಸಿಯಾ ಅಭಿವೃದ್ಧಿ ಸಮಿತಿ, ಪ್ಯಾನಲ್ ಅಧ್ಯಕ್ಷೆ ಪುಷ್ಪಲತಾ, ಅಸೋಸಿಯೇಟ್ ಶಿವಕುಮಾರ್ ಸೇರಿದಂತೆ ಕಾಸಿಯಾ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.