ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ವ್ಯಾಪಾರ ಬಲುಜೋರು

| Published : Mar 30 2025, 03:06 AM IST

ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ವ್ಯಾಪಾರ ಬಲುಜೋರು
Share this Article
  • FB
  • TW
  • Linkdin
  • Email

ಸಾರಾಂಶ

ಸಂಜೆಯ ಹೊತ್ತಿಗಾಗಲೇ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಹಬ್ಬದ ವಹಿವಾಟು ರಾತ್ರಿಯ ತನಕವೂ ಮುಂದುವರಿದಿತ್ತು.

ಕನ್ನಡಪ್ರಭ ವಾರ್ತೆ ಹೊಳೆನರಸಿಪುರ

ಯುಗಾದಿ ಹಬ್ಬದ ಮುನ್ನ ದಿನವಾದ ಶನಿವಾರ ಪಟ್ಟಣದ ಪೇಟೆ ಬೀದಿ, ವಾಣಿಜ್ಯ ಸಂಕೀರ್ಣಗಳು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಬಲು ಜೋರಾಗಿತ್ತು.

ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು, ಹೂ, ಮಾವಿನಸೊಪ್ಪು ವ್ಯಾಪಾರ ವಹಿವಾಟು ಭರ್ಜರಿಯಾಗಿ ಜರುಗುತ್ತಿತ್ತು. ತೆಂಗಿನಕಾಯಿ ಒಂದಕ್ಕೆ ೩೦ ರು. ನಿಂದ ೬೦ ರು. ತನಕವಿತ್ತು, ಒಂದು ಮಾರು( ೨ ಮೀಟರ್‌ನಷ್ಟು) ಕನಕಾಂಬರ ೬೦ ರು., ಸೇವಂತಿಗೆ ೮೦ ರು. ನಿಂದ ೧೨೦ ರು., ಮಲ್ಲಿಗೆ ಹೂ ೧೦೦ ರು. ಹಾಗೂ ಹೂವಿನ ಹಾರಗಳು ೧೫೦ ರು.ನಿಂದ ೨೦೦ ರು.ವರೆಗೂ ಮಾರುಕಟ್ಟೆಯಲ್ಲಿ ಧಾರಣೆ ಇತ್ತು. ಪೂಜಾ ಸಾಮಾಗ್ರಿಗಳಾದ ಅರಿಶಿಣ, ಕುಂಕುಮ, ಗಂಧದಕಡ್ಡಿ, ಕರ್ಪೂರ, ದೀಪದ ಬತ್ತಿ, ಎಣ್ಣೆ, ರಂಗೋಲಿ ಬಣ್ಣದ ಪುಡಿ ಹಾಗೂ ಗೃಹೋಪಯೋಗಿ ವಸ್ತುಗಳಿಗಾಗಿ ಅಂಗಡಿಗಳಿಗೆ ಜನರು ಮುಗಿಬಿದ್ದಿದ್ದರು, ಮಹಿಳೆಯರು ಸೀರೆ, ಡ್ರೆಸ್ಸ್ ಹಾಗೂ ಮಕ್ಕಳ ಬಟ್ಟೆ ಖರೀದಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಿದ ಕಾರಣ ಬಟ್ಟೆ ಅಂಗಡಿಗಳಲ್ಲಿ ವಹಿವಾಟು ಕಡಿಮೆಯಾಗಿತ್ತು. ಕೋಟೆ ಪ್ರವೇಶ ದ್ವಾರದಿಂದ ಕೋಟೆ ಶ್ರೀ ಮಾರಮ್ಮಗುಡಿ ವೃತ್ತದ ತನಕ ರಸ್ತೆಯ ಇಕ್ಕೆಲಗಳಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರ ವಹಿವಾಟು ಆರಂಭಗೊಂಡಿತ್ತು. ಸಂಜೆಯ ಹೊತ್ತಿಗಾಗಲೇ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಹಬ್ಬದ ವಹಿವಾಟು ರಾತ್ರಿಯ ತನಕವೂ ಮುಂದುವರಿದಿತ್ತು.

ಹಬ್ಬದ ಆಚರಣೆ ವೇಳೆ ಐದಾರು ದಿನಗಳು ನಡೆಯುತ್ತಿದ್ದ ವ್ಯಾಪಾರ ಕೋವಿಡ್ ಭೀಕರತೆಯ ನಂತರ ಒಂದು ದಿನಕ್ಕೆ ಸೀಮಿತಗೊಂಡಿದ್ದು, ಇಂತಹ ಸನ್ನಿವೇಶದಲ್ಲಿ ರಸ್ತೆಯಲ್ಲಿ ತಳ್ಳುಗಾಡಿಗಳಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವ ವರ್ತಕರಿಂದಾಗಿ ಅಂಗಡಿ ಮುಂಗಟ್ಟುಗಳಿಗೆ ತೆರಳಲು ಜನರು ಮತ್ತು ತಿರುಗಾಡಲು ದ್ವಿಚಕ್ರ ಹಾಗೂ ಆಟೋ ರಿಕ್ಷಾ ಚಾಲಕರು ಸುಗಮ ಸಂಚಾರದ ತೊಂದರೆಯಿಂದಾಗಿ ವ್ಯಾಪಾರ ಕುಂಟಿತಗೊಂಡಿದೆ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದರು.