ಸಾರಾಂಶ
ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾ:ಉತ್ತರ ಕರ್ನಾಟಕದಲ್ಲಿ ರೈತರ ಹಬ್ಬ ಎಂದೇ ಕರೆಯಲಾಗುವ ಕಾರಹುಣ್ಣಿಮೆ ಆನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತು ಪೂಜೆ ಮಾಡುವುದು ಸಂಪ್ರದಾಯ. ಆ ನಿಟ್ಟಿನಲ್ಲಿ ಪರಿಸರಸ್ನೇಹಿ ಮಣ್ಣೆತ್ತುಗಳು ಮಾರಾಟಕ್ಕೆ ಸಿದ್ಧಗೊಂಡಿವೆ.
ಪ್ರತಿಯೊಬ್ಬರ ಮನೆ-ಮನಗಳಲ್ಲಿ ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದಂದು ಮನೆಯಲ್ಲಿ ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳನ್ನು ತಂದು ಜಗುಲಿ ಮೇಲೆ ಇಟ್ಟು ಪೂಜಿಸಲಾಗುತ್ತದೆ. ಹಬ್ಬ ಮುಗಿದ ಬಳಿಕ ಅವುಗಳನ್ನು ಬಾವಿಯಲ್ಲಿ ವಿಸರ್ಜಿಸಲಾಗುತ್ತದೆ.ಪಟ್ಟಣದ ೭ನೇ ವಾರ್ಡ್ ನಿವಾಸಿ ಮಳಿಯಪ್ಪ ಬಡಿಗೇರ ಅವರು ತಮ್ಮ ಹಿರಿಯರ ಕಾಲದಿಂದಲೂ ಮಣ್ಣೆತ್ತು ತಯಾರಿಸಿ, ಮಾರಾಟ ಮಾಡುತ್ತಾ ಬಂದಿದ್ದಾರೆ. ಸ್ಥಳೀಯವಾಗಿ ಕೆಂಪು ಕೆರೆಯಲ್ಲಿ ದೊರೆಯುವ ಮಣ್ಣು ತಂದು ಸಂಸ್ಕರಿಸಿ, ಹದಗೊಳಿಸಿ ಮನೆಯಲ್ಲಿ ತಿಂಗಳ ಮುಂಚಿತವಾಗಿಯೇ ತಯಾರಿ ನಡೆಸುತ್ತಾರೆ. ೨೦೦೦ಕ್ಕೂ ಅಧಿಕ ಮಣ್ಣಿನ ಎತ್ತುಗಳನ್ನು ತಯಾರಿಸಿ, ಮಾರಾಟಕ್ಕೆ ಸಿದ್ಧಗೊಳಿಸಿದ್ದಾರೆ. ಎತ್ತುಗಳ ಗಾತ್ರ ಮತ್ತು ವಿನ್ಯಾಸದ ಮೇಲೆ ಅವುಗಳ ದರ ನಿಗದಿಯಾಗಿರುತ್ತದೆ. ಮಣ್ಣೆತ್ತುಗಳ ಜೋಡಿ ಒಂದಕ್ಕೆ ₹೮೦ರಿಂದ ₹೧೦೦ರ ವರೆಗೆ ಮಾರಾಟವಾಗುತ್ತವೆ.
ಪಟ್ಟಣ ಸೇರಿ ಸುತ್ತಲಿನ ಮಲಕಸಮುದ್ರ, ಮುಧೋಳ, ಕುದ್ರಿಕೊಟಗಿ, ಸಂಗನಾಳ, ಕಲ್ಲೂರು, ಕುಡಗುಂಟಿ, ಚಿಕ್ಕಮ್ಯಾಗೇರಿ, ಹನುಮಾಪುರ, ಜಿ. ಜರಕುಂಟಿ, ಕರಮುಡಿ, ಹೊಸಳ್ಳಿ, ಬಳೂಟಗಿ, ಚಿಕ್ಕೊಪ್ಪ, ತುಮ್ಮರಗುದ್ದಿ, ಗೆದಗೇರಿ ಹಾಗೂ ನಾನಾ ಕಡೆಯಿಂದ ಜನರು ಆಗಮಿಸಿ ಮಣ್ಣೆತ್ತು ಖರೀದಿಸುತ್ತಾರೆ.ವಿಶೇಷ ಪೂಜೆ, ಪ್ರಾರ್ಥನೆಗ್ರಾಮೀಣ ಪ್ರದೇಶದ ನಾನಾ ಗ್ರಾಮಗಳಲ್ಲಿ ಎರೆ ಮಣ್ಣು ತಂದು ರೈತರು ತಾವೇ ಎತ್ತುಗಳನ್ನು ತಯಾರಿಸುತ್ತಿದ್ದರು. ಆ ಪದ್ಧತಿ ಮರೆಯಾಗಿದ್ದು, ಕುಂಬಾರ ಕುಟುಂಬಗಳು ಇಂದಿಗೂ ಕೆರೆಯಿಂದ ಮಣ್ಣು ತಂದು ಮಣ್ಣೆತ್ತುಗಳನ್ನು ತಯಾರಿಸಿ, ಹಬ್ಬದಂದು ಮಾರಾಟ ಮಾಡುವುದು ಕಂಡು ಬರುತ್ತದೆ. ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡುವ ಮೂಲಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ರೈತರು, ಚಿಕ್ಕ ಮಕ್ಕಳ ಪಾಲಿಗೆ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ, ಸಡಗರ ತರುವ ಹಬ್ಬವಾಗಿದೆ ಎನ್ನಬಹುದು.ಮಣ್ಣಿನಿಂದ ಪರಿಸರಸ್ನೇಹಿ ಗಣೇಶ, ಎತ್ತುಗಳ ಮೂರ್ತಿ ತಯಾರಿ ಮಾಡುವುದು ಹಿರಿಯರ ಕಾಲದಿಂದ ಬಳುವಳಿಯಾಗಿ ಬಂದಿದೆ. ಕೆಂಪು ಕೆರೆಯಲ್ಲಿ ಮಣ್ಣು ತಂದು ಎರಡು ಸಾವಿರಕ್ಕೂ ಅಧಿಕ ಮಣ್ಣೆತ್ತು ತಯಾರಿಸಿದ್ದೇವೆ. ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳ ರೈತರು ನೇರವಾಗಿ ಮನೆಗೆ ಬಂದು ಖರೀದಿಸುತ್ತಾರೆ.
ವಿರೂಪಾಕ್ಷಪ್ಪ ಬಡಿಗೇರ, ಮಣ್ಣೆತ್ತು ತಯಾರಕ, ಯಲಬುರ್ಗಾ