ವಿದ್ಯಾರ್ಥಿಗಳು ಭಯವನ್ನು ಮೆಟ್ಟಿ ನಿಲ್ಲಬೇಕು, ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಹಾಗೂ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬಾರದು ಎಂದ ಅವರು, ಉತ್ತಮ ತಂಡವನ್ನು ಕಟ್ಟಲು ನೆಟ್ ವರ್ಕಿಂಗ್ ಮತ್ತು ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಜಂಟಿ ಕಾರ್ಯ ಅಥವಾ ಸಾಂಘಿಕ ಶ್ರಮವೇ ಯಶಸ್ಸಿಗೆ ಕಾರಣವಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ವ್ಯಾಪಾರ ಅಥವಾ ವ್ಯವಹಾರ ಎನ್ನುವುದು ಹಣ ಗಳಿಸುವುದರ ಸುತ್ತ ಸುತ್ತುತ್ತದೆ ಎಂದು 1 ಬೈ 0 ಗ್ರಿಟ್ ಮತ್ತು ಈಶಾವಾಸ್ಯ ಸಂಸ್ಥೆಗಳ ಸಹ-ಸಂಸ್ಥಾಪಕ ವಿಜಯಾನಂದ್ ಗುರುದೇವ್ ಹೇಳಿದರು.ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಪಿ.ಜಿ.ವಿದ್ಯಾರ್ಥಿಗಳ ವೇದಿಕೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿಯ ಪಾತ್ರ ಕಾರಿಗೆ ಬ್ರೇಕ್ ಇದ್ದಂತೆ ಅತ್ಯಂತ ಪ್ರಮುಖವಾದುದು. ಸಂಸ್ಥೆಯಲ್ಲಿ ಪ್ರತಿಯೊಬ್ಬರು ಮುಖ್ಯರಾದರೂ, ಹಣಕಾಸು ಅಧಿಕಾರಿ ಹೆಚ್ಚು ಪ್ರಮುಖರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.ವಿದ್ಯಾರ್ಥಿಗಳು ಭಯವನ್ನು ಮೆಟ್ಟಿ ನಿಲ್ಲಬೇಕು, ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಹಾಗೂ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬಾರದು ಎಂದ ಅವರು, ಉತ್ತಮ ತಂಡವನ್ನು ಕಟ್ಟಲು ನೆಟ್ ವರ್ಕಿಂಗ್ ಮತ್ತು ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಜಂಟಿ ಕಾರ್ಯ ಅಥವಾ ಸಾಂಘಿಕ ಶ್ರಮವೇ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.
ಕೇವಲ ನೌಕರಿಗೆ ಸೇರುವುದಕ್ಕಿಂತ ಉದ್ಯಮಿಗಳಾಗಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಪ್ರೋತ್ಸಾಹಿಸಿದ, ಪದವಿ ಮುಗಿಸಿ ಹೊರ ಹೋಗುವ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಗೆ ಮರಳಿ ಕೊಡುಗೆ ನೀಡಬೇಕು ಮತ್ತು ಬಲಿಷ್ಠ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಕಟ್ಟಬೇಕು ಎಂದು ಕರೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, ಪಿ.ಜಿ ಕೇಂದ್ರದಲ್ಲಿ ಎಂ.ಕಾಂ ಮತ್ತು ಎಂ.ಸಿ.ಎ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದ ಸೆಮಿನಾರ್‌ಗಳು, ಕಾರ್ಯಾಗಾರಗಳು ಹಾಗೂ ವಿಶೇಷ ಉಪನ್ಯಾಸಗಳ ಕುರಿತು ಮಾಹಿತಿ ನೀಡಿದರು.
ಪಠ್ಯದ ಜೊತೆಗೆ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ವಿಭಾಗೀಯ ಮುಖ್ಯಸ್ಥರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿ ಭಯದಿಂದ ಹೊರಬರಲು, ನಕಾರಾತ್ಮಕ ಟೀಕೆಗಳನ್ನು ನಿರ್ಲಕ್ಷಿಸಲು, ಸೋಮಾರಿತನ ಮತ್ತು ಅಹಂಕಾರವನ್ನು ಕೈಬಿಟ್ಟು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ತಿಳಿಸಿದರು.ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬರೂ ಮೆದುಳಿನ ಎಡ ಮತ್ತು ಬಲ ಎರಡೂ ಭಾಗಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು. ಹೆಚ್ಚಿನ ಜನರು ಎಡಭಾಗದ ಮೆದುಳನ್ನು ಬಳಸುವುದಿಲ್ಲ. ಆದರೆ ಇದು ಹೆಚ್ಚಿನ ನೆನಪಿನ ಶಕ್ತಿಯನ್ನು ಹೊಂದಿದ್ದು, ಅತ್ಯಂತ ಚುರುಕಾಗಿರುತ್ತದೆ. ವಿದ್ಯಾರ್ಥಿಗಳು ತಾವು ಓದಿದ್ದನ್ನು ಕಾಲಕಾಲಕ್ಕೆ ನೆನಪಿಸಿಕೊಳ್ಳುತ್ತಿರಬೇಕು. ಇದು ಪರೀಕ್ಷೆಯ ಸಮಯದಲ್ಲಿ, ಸಂದರ್ಶನಗಳನ್ನು ಎದುರಿಸುವಾಗ ಅಥವಾ ಯಾರೊಂದಿಗಾದರೂ ಮಾತನಾಡುವಾಗ ಸಹಾಯ ಮಾಡುತ್ತದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ವಿದ್ಯಾವರ್ಧಕ ಸಂಘದ ಸ್ಥಾಪನೆ ಮತ್ತು ಕಾಲೇಜು ಹಂತ ಹಂತವಾಗಿ ಬೆಳೆದು ಬಂದ ಹಾದಿಯ ಬಗ್ಗೆ ಬೆಳಕು ಚೆಲ್ಲಿದರು. ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಒತ್ತಿ ಹೇಳಿದ ಅವರು, ವಿದ್ಯಾರ್ಥಿಗಳು ಕೇವಲ ಸ್ವಂತ ಕಾಲೇಜಿನಲ್ಲಿ ಮಾತ್ರವಲ್ಲದೆ ಇತರ ಕಾಲೇಜುಗಳ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧಕರಾಗಬೇಕು ಎಂದು ಆಶಿಸಿದ ಅವರು, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಯಶಸ್ಸನ್ನು ಕೋರಿದರು.
ಅಂತಿಮ ವರ್ಷದ ಎಂ.ಕಾಂ ವಿದ್ಯಾರ್ಥಿನಿಯರಾದ ಎಂ.ಕೆ. ತ್ರಿವೇಣಿ ಮತ್ತು ಕೆ. ವಿದ್ಯಾಶ್ರೀ ಪ್ರಾರ್ಥಿಸಿದರು. ಎಂ. ನಂದಿನಿ ಸ್ವಾಗತಿಸಿದರು. ಅಂತಿಮ ವರ್ಷದ ಎಂ.ಕಾಂ ವಿದ್ಯಾರ್ಥಿನಿ ಎಂ.ಕೆ. ಲಕ್ಷ್ಮೀಶ್ರೀ ನಿರೂಪಿಸಿದರು. ಡಿ. ಗೌತಮಿ ವಂದಿಸಿದರು.ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.