ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಂಗಳವಾರ ಮಧ್ಯಾಹ್ನ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಾಗಮಂಗಲ: ಪಟ್ಟಣದ ಸ್ಟಾರ್ ಗ್ರೂಪ್ಸ್ ಮಾಲೀಕ, ಉದ್ಯಮಿ ಅಮೀರುಲ್ ಹಂಜಾ(65) ಅವರು ಸೋಮವಾರ ತಡರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ನಾಲ್ವರು ಪುತ್ರರು ಹಾಗೂ ನಾಲ್ವರು ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸ್ಟಾರ್ ಗ್ರೂಪ್ಸ್ ಹೆಸರಿನಲ್ಲಿ ಹತ್ತಾರು ಕೋಳಿ ಫಾರಂಗಳು ಮತ್ತು ಕೋಳಿ ಆಹಾರ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದ್ದರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಂಗಳವಾರ ಮಧ್ಯಾಹ್ನ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಸತಿ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ದೂರವಾಣಿ ಮೂಲಕ ಕುಟುಂಬಸ್ಥರಿಗೆ ಕರೆ ಮಾಡಿ ಸಾಂತ್ವನ ಹೇಳಿದರು. ಪಟ್ಟಣದ ಮಂಡ್ಯ ರಸ್ತೆಯ ಅವರ ಸ್ವಗೃಹದಲ್ಲಿ ಮಂಗಳವಾರ ಸಂಜೆವರೆಗೂ ಸಾರ್ವಜನಿಕ ದರ್ಶನಕ್ಕೆ ಮೃತದೇಹವನ್ನಿರಿಸಲಾಗಿತ್ತು. ನಂತರ ಮೈಸೂರು ರಸ್ತೆಯ ಕೆ.ಮಲ್ಲೇನಹಳ್ಳಿ ಸಮೀಪದ ಖಬರಸ್ಥಾನ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.