ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿದಾನ ಮಾಡಿದ ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್

| Published : Oct 09 2024, 01:43 AM IST

ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿದಾನ ಮಾಡಿದ ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ಸೇರಿರುವ ಚರ ಮತ್ತು ಸ್ಥಿರ ಆಸ್ತಿ, ಹಣ, ವ್ಯಾಪಾರ ವಹಿವಾಟು ಸಮಸ್ತ ಸಂಪತ್ತು ಇಂದಿನಿಂದ ಡಾ.ಸಿದ್ದರಾಜು ಸ್ವಾಮಿ ಅವರಿಗೆ ಸೇರಿದೆ. ಇದು ಸಮಾಜೋಪಯೋಗಿ ಸೇವೆಗೆ ಬಳಕೆಯಾಗಲಿ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಪಾಲನಹಳ್ಳಿ ಮಠದ ಸಾಮಾಜಿಕ ಸೇವೆಯನ್ನು ಗುರುತಿಸಿ, ನನಗೆ ಸೇರಿರುವ ಗಣಿಗಾರಿಕೆ ಪ್ರದೇಶದ 3 ಸಾವಿರ ಎಕರೆ ಭೂಮಿ ಮತ್ತು ಇತರೆ ಸಮಸ್ತ ಆಸ್ತಿಯನ್ನು ದಾನವಾಗಿ ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷ ಡಾ.ಸಿದ್ದರಾಜ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದ್ದೇನೆ ಎಂದು ಕಲ್ಲಿದ್ದಲು ಮತ್ತು ಚಿನ್ನದ ಅದಿರು ಗಣಿ ಮಾಲೀಕ ರಾಜಾಸ್ತಾನ ಮೂಲದ ಪಿ.ಬಿ.ಓಸ್ವಾಲ್ ಜೈನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ ಸೇವಾ ಕೈಂಕರ್ಯಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ನಾನು ಸ್ವಯಾರ್ಜಿತವಾಗಿ ಸಂಪಾದಿಸಿರುವ 3 ಸಾವಿರ ಎಕರೆಯಲ್ಲಿ ಕಲ್ಲಿದ್ದಲು ಮತ್ತು ಇತರೆ ಗಣಿಗಾರಿಕೆ ನಡೆಸಿಕೊಂಡು ಬರುತ್ತಿದ್ದು ಮುಂಬೈನ ವಿವಿಧೆಡೆಗಳಲ್ಲಿ ನನಗೆ ಸೇರಿರುವ ಕಟ್ಟಡ ಮತ್ತು ಸ್ಥಿರ ಮತ್ತು ಚರ ಆಸ್ತಿಯಲ್ಲಿ ಗಳಿಸಿರುವ ಸಂಪತ್ತಿಗೆ ಪ್ರತಿ ವರ್ಷವೂ ಚಾಚೂ ತಪ್ಪದೆ 500 ಕೋಟಿ ಆದಾಯ ತೆರಿಗೆ ಪಾವತಿಸಿದ್ದೇನೆ ಎಂದು ಹೇಳಿದರು.

ನನಗೆ ಸೇರಿರುವ ಗಣಿಗಾರಿಕೆ ಮತ್ತು ಜರ್ಮನಿ, ಜಪಾನ್, ಕೊರಿಯಾ, ಆಸ್ಟ್ರೇಲಿಯಾ ಇತರೆ ದೇಶಗಳಲ್ಲಿನ ವ್ಯಾಪಾರ ವಹಿವಾಟನ್ನು ಪೂರ್ಣವಾಗಿ ಡಾ.ಸಿದ್ದರಾಜು ಸ್ವಾಮೀಜಿ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದು, ಇಂದು ಬ್ಯಾಂಕ್ ವಹಿವಾಟು ಮತ್ತು ಭೂಮಿ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದ್ದೇನೆ. ನನಗೆ ಸೇರಿರುವ ಚರ ಮತ್ತು ಸ್ಥಿರ ಆಸ್ತಿ, ಹಣ, ವ್ಯಾಪಾರ ವಹಿವಾಟು ಸಮಸ್ತ ಸಂಪತ್ತು ಇಂದಿನಿಂದ ಡಾ.ಸಿದ್ದರಾಜು ಸ್ವಾಮಿ ಅವರಿಗೆ ಸೇರಿದೆ. ಇದು ಸಮಾಜೋಪಯೋಗಿ ಸೇವೆಗೆ ಬಳಕೆಯಾಗಲಿ ಎಂದು ಹೇಳಿದರು.

ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಮಾತನಾಡಿ, ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್ ಅವರು ಸ್ವಹಿಚ್ಛೆಯಿಂದ ದಾನವಾಗಿ ನೀಡಿರುವ ಸಮಸ್ತ ಆಸ್ತಿಯನ್ನು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಆಯುರ್ವೇದ ಪರಂಪರೆ ಮುಂದುವರೆಸಲು ಮತ್ತು ಬಡವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು, ಬಡವರ ಮನೆಯಲ್ಲಿ ಬೆಳಕು ಮೂಡಲು ವಿನಿಯೋಗಿಸುತ್ತೇನೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಪುನಶ್ಚೇತನಗೊಳಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

ಗ್ರಾಮೀಣ ಸೇವಾ ಟ್ರಸ್ಟ್ ವತಿಯಿಂದ ದೇವತೆಗಳ ಪ್ರತಿಷ್ಠಾಪನೆ ಮತ್ತು ಶಿವಗಂಗೋತ್ರಿ ಶಿಕ್ಷಣ ಸಂಸ್ಥೆಯಿಂದ ಮಾತಂಗಿ ಮಾತೆಯ 218 ಅಡಿ ಎತ್ತರದ ಲೋಹ ವಿಗ್ರಹವನ್ನು ಕೆರೆಗೋಡು ಮಠದಲ್ಲಿ ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದೇವೆ. ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ತಿಪ್ಪಸಂದ್ರ ಹೋಬಳಿ ಹೊನ್ನಾಪುರದಲ್ಲಿನ ನಮಗೆ ಸೇರಿರುವ 40 ಎಕರೆ ವಿಸ್ತೀರ್ಣದಲ್ಲಿ ಗೋಶಾಲೆ ಆರಂಭಿಸಲಾಗುವುದು. ದಾನಿಗಳು ನೀಡಿರುವ ಸಕಲ ಆಸ್ತಿಯನ್ನು ಜನೋಪಯೋಗಿ ಸೇವಾ ಕೆಲಸಗಳಿಗೆ ಬಳಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೊಸದುರ್ಗದ ಪರಮೇಶ್ವರಪ್ಪ ಮಾತನಾಡಿ, ಬೆಂಗಳೂರು ಮತ್ತು ದೇವನಹಳ್ಳಿ ಹಾಗೂ ರಾಜ್ಯದ ಇತರೆಡೆಗಳಲ್ಲಿ ಹೊನ್ನಾಳಿ ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಸಾವಿರಾರು ಎಕರೆ ಭೂಮಿ ಇದೆ. ಡಿ.ದೇವರಾಜ ಅರಸು ಅಧಿಕಾರಾವಧಿಯಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡ ಬಸ್‌ನಿಲ್ದಾಣ ಮತ್ತು ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ನಿರ್ಮಿಸಲು ಮಠದ ಭೂಮಿ ನೀಡಿದ್ದರು. ದೇವನಹಳ್ಳಿ ಬಳಿ ಮಠಕ್ಕೆ ಸೇರಿರುವ ೪೦೦ ಎಕರೆ ಭೂಮಿ ಇದೆ. ರಾಜ್ಯದ ವಿವಿಧೆಡೆಗಳಲ್ಲಿರುವ ರಾಮಲಿಂಗೇಶ್ವರ ಮಠಕ್ಕೆ ಸೇರಿರುವ ಭೂಮಿಯನ್ನು ಮಠಕ್ಕೆ ಒಪ್ಪಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ಶಾರದಮ್ಮ, ನಿವೃತ್ತ ಐಎಎಸ್ ಅಧಿಕಾರಿ ಬಾಬು ರಾಮ್ ಮುಡಬಿ, ವಾಣಿಜ್ಯ ತೆರಿಗೆ ಇಲಾಖೆಯ ಅಡಿಷನಲ್ ಕಮಿಷನರ್ ತೇಗನೂರ್, ನಿವೃತ್ತ ಪ್ರಿನ್ಸಿಪಲ್ ಚೀಪ್ ಕಮಿಷನರ್, ಭೀಮಾಶಂಕರ್, ಕೇರಳದ ಎಫ್.ಆರ್.ಸಿ ದಿನೇಶ್ ಮನೋಹರನ್, ಶಿಕ್ಷಣ ತಜ್ಞೆ ಅಮಲಾ, ಪುಷ್ಪ, ನಿವೃತ್ತ ಐಎಫ್‌ಎಸ್ ಅಧಿಕಾರಿ ಕೇಶವಮೂರ್ತಿ, ವಕೀಲ ಜಯನಾರಾಯಣ್, ಎಂಜಿನಿಯರ್ ಗುರುನಾಥ್, ಶ್ರೀಮಠದ ವಿಶ್ವವಾಣಿ ಹಾಗೂ ಮಠದ ಭಕ್ತರು ಹಾಜರಿದ್ದರು.