ಸಾರಾಂಶ
ಎಸ್.ಜಿ. ತೆಗ್ಗಿನಮನಿ
ನರಗುಂದ: ಆಗಸ್ಟ್ ಮೊದಲ ವಾರದಿಂದ ಸುರಿದ ನಿರಂತರ ಮಳೆಯಿಂದಾಗಿ ತಾಲೂಕಿನಲ್ಲಿ ಹೆಸರು ಬೆಳೆ ಹಾಳಾಗಿದ್ದು, ಉಳಿದ ಅಲ್ಪಸ್ವಲ್ಪ ಹೆಸರು ರಾಶಿ ಮಾಡಿ ಮಾರಾಟಕ್ಕೆ ಮುಂದಾದರೆ ಈ ಬೆಳೆ ಖರೀದಿಸಲು ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ. ಹೀಗಾಗಿ ಬೆಳೆಗಾರರಿಗೆ ದಿಕ್ಕು ತೋಚದಾಗಿದೆ.ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು ಬಿತ್ತನೆ ಮಾಡಿದ್ದರು, ಬೆಳೆ ಹೂವು, ಮೊಗ್ಗು ಇದ್ದ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ ವಿಪರೀತ ಮಳೆ ಆಗಿದ್ದರಿಂದ ಭೂಮಿಗೆ ತೇವಾಂಶ ಹೆಚ್ಚಾಗಿ ಹೂವು, ಮೊಗ್ಗು ಉದುರಿ ಹೋಯಿತು, ಹೀಗಾಗಿ ಹೆಚ್ಚಿನ ಕಾಯಿ ಕಟ್ಟಲು ಸಾಧ್ಯವಾಗಲಿಲ್ಲ. ಅಲ್ಪಸ್ವಲ್ಪ ಕಾಯಿ ಆಗಿತ್ತು, ರೈತ ಯಂತ್ರಗಳ ಮೂಲಕ ಕಟಾವು ಮಾಡಿ ರಾಶಿ ಮಾಡಿಕೊಂಡು ಮಾರುಕಟ್ಟೆಗೆ ಮಾರಾಟ ಮಾಡಲು ಹೋದರೆ ವ್ಯಾಪಾರಸ್ಥರು ಈ ಹೆಸರು ಕಾಳು ಮಳೆಯಿಂದ ಹಾನಿಯಾಗಿದೆ. ₹ 3500ರಿಂದ 4000ಗಳಿಗೆ ಮಾತ್ರ ಖರೀದಿ ಮಾಡುತ್ತೇವೆಂದು ಹೇಳುತ್ತಿದ್ದಾರೆ.
ಹೆಸರು ಕಟಾವು ಮಾಡುವ ಪ್ರಾರಂಭದಲ್ಲಿ ಈ ವರ್ಷ ಪ್ರತಿ ಕ್ವಿಂಟಲ್‌ಗೆ 8ರಿಂದ 10 ಸಾವಿರ ಬೆಲೆ ಇತ್ತು. ಆದರೆ ನಂತರದ ದಿನ ನಿರಂತರ ಮಳೆಯಿಂದ ಕಟಾವಿಗೆ ಬಂದ ಹೆಸರು ಕಾಳು ಗಿಡದಲ್ಲಿ ಹಾನಿಯಾಗಿತ್ತು. ಮಳೆಗೆ ಸಿಲುಕಿದ ಹೆಸರು ಖರೀದಿಗೆ ಯಾವ ವ್ಯಾಪಾರಸ್ಥರು ಆಸಕ್ತಿ ತೋರಿಸುತ್ತಿಲ್ಲ ಎಂದು ತಾಲೂಕಿನ ಅರಿಷಣಗೋಡಿ ಗ್ರಾಮದ ರೈತ ಬಸವರಡ್ಡಿ ರಾಯರಡ್ಡಿ ಹೇಳಿದರು. ತಾಲೂಕಿನ ರೈತರು ಎಕರಗೆ 4ರಿಂದ 6 ಕ್ವಿಂಟಲ್ ಬೆಳೆ ತೆಗೆಯುತ್ತಿದ್ದರು. ಆದರೆ, ಈ ವರ್ಷ ಅತೀಯಾಗಿ ಮಳೆ ಆಗಿದ್ದರಿಂದ ಎಕರೆಗೆ 1ರಿಂದ 2 ಕ್ವಿಂಟಲ್ ಮಾತ್ರ ಇಳುವರಿ ಬಂದಿದೆ.ಮುಂಗಾರು ಹಂಗಾಮಿನಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ ಎಂದು ತಾಲೂಕಾ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣೆ ಹೇಳಿದರು.
ಈ ವರ್ಷ ರೈತರು ಬೆಳೆದ ಹೆಸರನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಬೆಂಬಲ ಬೆಲೆ ಕೇಂದ್ರ ಪ್ರಾರಂಭ ಮಾಡಬೇಕೆಂದು ಜಿಲ್ಲಾಧಿಕಾರಿ ಕಚೇರಿಯಿಂದ ಸರ್ಕಾರಕ್ಕೆ ಪತ್ರ ರವಾನೆ ಮಾಡಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನರ ಹೇಳಿದರು.ಪ್ರಸಕ್ತ ವಷ೯ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಹೆಸರನ್ನು ಸರ್ಕಾರ ಯಾವುದೇ ರೀತಿಯ ನಿಯಮಗಳನ್ನು ಅನ್ವಯ ಮಾಡದೇ ಎಲ್ಲಾ ರೈತರ ಹೆಸರನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಜಿಲ್ಲಾ ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಹೇಳಿದರು.