ಗಣೇಶೋತ್ಸವಕ್ಕೆ ಸಡಗರದ ಸಿದ್ಧತೆ

| Published : Aug 27 2025, 01:02 AM IST

ಸಾರಾಂಶ

ಪಟ್ಟಣದ ಬೀದಿಗಳೆಲ್ಲವೂ ಹಬ್ಬದ ಸಂಭ್ರಮದಲ್ಲಿ ತೇಲುತ್ತಿವೆ. ಗಣಪತಿಯನ್ನು ಸ್ವಾಗತಿಸಲು ಪಟ್ಟಣದ ಜನತೆ ಉತ್ಸಾಹಭರಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಬೀದಿಗಳೆಲ್ಲವೂ ಹಬ್ಬದ ಸಂಭ್ರಮದಲ್ಲಿ ತೇಲುತ್ತಿವೆ. ಗಣಪತಿಯನ್ನು ಸ್ವಾಗತಿಸಲು ಪಟ್ಟಣದ ಜನತೆ ಉತ್ಸಾಹಭರಿತರಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಗಣೇಶ ಮೂರ್ತಿಗಳ ಖರೀದಿ, ಅಲಂಕಾರಿಕ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರದಿಂದ ಸಾಗುತ್ತಿದೆ.

ಭಿನ್ನ ಭಂಗಿಯ ಗಣೇಶ ಮೂರ್ತಿ:

ಪಟ್ಟಣದ ಗಣೇಶ ಮಂಡಳಿಗಳು ತಮ್ಮದೇ ಆದ ವೈಶಿಷ್ಟ್ಯ ತೋರಿಸಲು ಬಿರುಸಿನ ಸಿದ್ಧತೆಯಲ್ಲಿ ನಿರತರಾಗಿವೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣಪ ಮೂರ್ತಿಗಳ ಪ್ರತಿಷ್ಠಾಪನೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ಮಂಡಳಿಗಳು ತಮ್ಮ ಅಭಿರುಚಿ ಹಾಗೂ ಹೊಸತನಕ್ಕೆ ತಕ್ಕಂತೆ ಗಣೇಶ ಮೂರ್ತಿಗಳನ್ನು ತಯಾರಕರಿಗೆ ಮುಂಚಿತವಾಗಿ ತಿಳಿಸಿ ಆರ್ಡರ್‌ ನೀಡಿವೆ. ಅದರಂತೆ ಈಗ ಶಿವ ಗಣಪತಿ, ಕೃಷ್ಣ ಗಣಪತಿ, ಮಹಾರಾಜ ಗಣಪತಿ, ದರ್ಬಾರ್ ಶೈಲಿಯ ಗಣಪತಿ, ತಿರುಪತಿ ಗಣಪತಿ, ಸಿಂಹಾರೂಢ, ಗಜವಾಹನ, ಅಂಜನೇಯ ಗಣಪತಿ, ನಾಗರಹಾವು ಆಧಾರಿತ ಗಣಪತಿ, ಕಮಲಾರೂಢ, ನೃತ್ಯಪಟು, ವೀಣಾಧಾರಿಣಿ ಶೈಲಿಯ ಗಣಪತಿ, ಆಕಳು, ಅಶ್ವ, ರಥದ ಮೇಲೆ ಕುಳಿತ ಗಣಪತಿ, ದುರ್ಗಾದೇವಿಯ ಸಮೇತ ಗಣಪತಿ, ಹದ್ದು-ಗೂಬೆ-ಆನೆ-ಸಿಂಹ ಪ್ರಭಾವಳಿಯ ಗಣಪತಿ ಮುಂತಾದ ವೈವಿಧ್ಯಮಯ ಮೂರ್ತಿಗಳು ಸಿದ್ಧಗೊಂಡಿದ್ದು, ನೋಡುಗರ ಕಣ್ಣು ತಣಿಸುವಂತಿವೆ.

ಕೊಲ್ಕತ್ತಾ ತಂಡ:

ಪಟ್ಟಣದ ಬಳ್ಳಾರಿ ರಸ್ತೆಯ ಬಳಿ ನಿರ್ಮಿಸಿದ ತಾತ್ಕಾಲಿಕ ಟೆಂಟ್‌ನಲ್ಲಿ ಕೊಲ್ಕತ್ತಾದ ಪ್ರಸಿದ್ಧ ಕಲಾವಿದರ ತಂಡ ಕಳೆದ 2 ತಿಂಗಳಿನಿಂದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿತ್ತು. ಮಣ್ಣಿನ ಮೂರ್ತಿಗಳನ್ನು ಅತ್ಯಂತ ಕೌಶಲ್ಯದಿಂದ ರೂಪಿಸಿದ ನಂತರ ಈಗ ಕೊನೆಯ ಹಂತವಾಗಿ ಬಣ್ಣ ಹಚ್ಚಿ, ಪಂಚೆ-ಶಲ್ಯ ಅಳವಡಿಸಿ ಆಕರ್ಷಕವಾಗಿ ಅಲಂಕರಿಸಲಾಗಿದೆ. 3 ಅಡಿ ಎತ್ತರದಿಂದ ಹಿಡಿದು 15 ಅಡಿ ಎತ್ತರದವರೆಗೆ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಪ್ರತಿಯೊಂದು ಮೂರ್ತಿಯೂ ಖರೀದಿದಾರರ ಮನ ಸೆಳೆಯುತ್ತಿದೆ.

ಮನೆಗಳಲ್ಲಿ ಪ್ರತಿಷ್ಠಾಪನೆಗೆ ಚಿಕ್ಕ ಮೂರ್ತಿಗಳ ಬೇಡಿಕೆ:

ಪಟ್ಟಣದ ಮಾರೆಮ್ಮ ದೇವಸ್ಥಾನ, ಪೇಟೆ ಬಸವೇಶ್ವರ ದೇವಸ್ಥಾನ ಹಾಗೂ ನಡುವಲ ಮಸೀದಿ ಬಳಿ ಮನೆಗಳಲ್ಲಿ ಪ್ರತಿಷ್ಠಾಪಿಸಲು ಚಿಕ್ಕ ಗಾತ್ರದ ಗಣಪ ಮೂರ್ತಿ ಮಾರಾಟಕ್ಕೆ ಇಟ್ಟಿದ್ದು, ಭಕ್ತರು ಕುಟುಂಬ ಸಮೇತರಾಗಿ ಬಂದು ಭರದಿಂದ ಖರೀದಿಸುತ್ತಿದ್ದಾರೆ. ಪ್ರತಿಯೊಬ್ಬರಲ್ಲೂ ಹಬ್ಬದ ಸಂಭ್ರಮ ಕಂಡು ಬರುತ್ತಿದೆ.

ಅಲಂಕಾರಿಕ ವಸ್ತುಗಳ ಮಾರಾಟ ಜೋರು:

ಗಣೇಶ ಹಬ್ಬದ ಅಲಂಕಾರಕ್ಕಾಗಿ ಬಣ್ಣದ ಕಾಗದಗಳು, ಹೂಮಾಲೆಗಳು, ಪ್ಲಾಸ್ಟಿಕ್ ತೋರಣಗಳು, ಬಣ್ಣ ಬಣ್ಣದ ಬಲ್ಪ್ ಸರಗಳು, ಮಾವಿನ ತೋರಣ, ಬಾಳೆ ಗೊನೆ, ಅಲಂಕಾರಿಕ ಚಕ್ರಗಳು, ಹೂ-ಹಣ್ಣು-ಕಾಯಿ ಸೇರಿದಂತೆ ಅಗತ್ಯವಸ್ತುಗಳ ಖರೀದಿ ಪಟ್ಟಣದಲ್ಲಿ ಚುರುಕುಗೊಂಡಿದೆ. ಸಂಜೆ ವೇಳೆಗೆ ಮಾರುಕಟ್ಟೆಗಳು ಜನಸಂದಣಿಯಿಂದ ತುಂಬಿ ಹಬ್ಬದ ಕಳೆ ಹೆಚ್ಚಿಸುತ್ತಿವೆ.

ವಿಶೇಷ ಮೆರಗು:

ಪಟ್ಟಣದ ಪ್ರತಿಯೊಂದು ಬೀದಿ-ಬೀದಿಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದೇವರ ಆರಾಧನೆ, ಭಕ್ತರ ಭಕ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆ ಎಲ್ಲಾ ಸೇರಿ ಈ ಬಾರಿ ಗಣೇಶೋತ್ಸವಕ್ಕೂ ವಿಶೇಷ ಮೆರಗು ನೀಡಲಿವೆ. ಇನ್ನು ಗಣೇಶ ವಿಸರ್ಜನೆಗಾಗಿ ಇಲ್ಲಿನ ಹಿಂದೂ ಮಹಾ ಮಂಡಳಿ, ಲಯನ್ಸ್ ಗ್ರೂಪ್, ವೀರ ಕಂಪಿಲರಾಯ ವಿನಾಯಕ ಮಂಡಳಿ ಸೇರಿದಂತೆ ವಿವಿಧ ಗಣೇಶ ಮಂಡಳಿಯವರು ಗಣೇಶ ವಿಸರ್ಜನೆ ದಿನದಂದು ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಕಲಾ ತಂಡಗಳ ಮೂಲಕ ಗಣೇಶ ವಿಸರ್ಜನೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಪಟ್ಟಣದಲ್ಲಿ ಜಾತ್ರೆಯಲ್ಲಿ ವಾತಾವರಣ ನಿರ್ಮಿಸಲು ಸಜ್ಜಾಗಿದ್ದಾರೆ. 3ನೇ ದಿನದಿಂದ 13ದಿನದವರೆಗೂ ಗಣೇಶನ ವಿಸರ್ಜನೆ ಮೆರವಣಿಗೆಗಳು ನಡೆಯಲಿವೆ.