ಸಾರಾಂಶ
ಗುರುಮಠಕಲ್ ಸಮೀಪದ ನಸಲವಾಯಿ ಗ್ರಾಮದಲ್ಲಿ ರೈತರಿಗೆ ಹತ್ತಿ ಬಿತ್ತನೆ ಬೀಜ ಕುರಿತು ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಅಧಿಕೃತ ಮಾರಾಟಗಾರರಿಂದ ಬಿತ್ತನೆ ಬೀಜ ಖರೀದಿಸುವಂತೆ ಸಹಾಯಕ ಕೃಷಿ ನಿರ್ದೇಶಕ ರಾಜುಕುಮಾರ ರೈತರಿಗೆ ಸಲಹೆ ನೀಡಿದರು.ಸಮೀಪದ ತೆಲಂಗಾಣ ಗಡಿ ಭಾಗದ ಗ್ರಾಮಗಳಾದ ನಸಲವಾಯಿ, ಕುಂಟಿಮರಿ, ಗುರನೂರ, ಜೈಗ್ರಾಮ, ಕರಣಗಿ ಗ್ರಾಮಗಳಲ್ಲಿ ರೈತರಿಗೆ ಹತ್ತಿ ಬಿತ್ತನೆ ಬೀಜ ಕುರಿತು ನಡೆದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಅನಧಿಕೃತ ಮಾರಾಟಗಾರರು ಬೀಜ ಮಾರಾಟ ಮಾಡುವುದು ಕಂಡು ಬಂದಲ್ಲಿ ತಕ್ಷಣ ಇಲಾಖೆಗೆ ದೂರು ನೀಡುವಂತೆ ತಿಳಿಸಿದರು.
ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಇಲಾಖೆಗೆ ದೂರು ನೀಡಬೇಕು. ಬಿತ್ತನೆ ಬೀಜ ಖರೀದಿಸಿದ ನಂತರ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಪ್ಯಾಕಿಂಗ್ ಮತ್ತು ಲೇಬಲಿಂಗ್ ಇಲ್ಲದ ಹತ್ತಿ ಬೀಜ ಸೇರಿದಂತೆ ಇತರೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಮಾರಾಟ ಮಾಡುವವರು ಕಂಡು ಬಂದರೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡುವಂತೆ ರೈತರಲ್ಲಿ ಮನವಿ ಮಾಡಿದರು. ಈ ವೇಳೆ ಕೃಷಿ ಅಧಿಕಾರಿ ಮೈಪಾಲರೆಡ್ಡಿ, ಉಪ ಯೋಜನಾ ನಿರ್ದೇಶಕ ಡಾ. ಹೊನ್ನಯ್ಯ, ರೈತರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.