ಸಾರಾಂಶ
ಬ್ಯಾಡಗಿ: ಕಳಪೆ ಬೀಜಗಳಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಖರೀದಿ ಆದ್ಯತೆ ನೀಡುವಂತೆ ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಅವರು ಮನವಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬಿತ್ತನೆ ಬೀಜ ಖರೀದಿಸುವಾಗ ಎಚ್ಚರ ವಹಿಸುವುದು ಉತ್ತಮ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ಕೊರತೆ ಇದ್ದಾಗ ಮಾತ್ರ ಕೃಷಿ ಇಲಾಖೆಯಿಂದ ಮಾರಾಟದ ಪರವಾನಗಿ ಹೊಂದಿರುವ ಅಧಿಕೃತ ಮಾರಾಟಗಾರರಿಂದ ಬಿತ್ತನೆ ಬೀಜ ಖರೀದಿಸಬೇಕು. ಬೀಜ ಖರೀದಿಸುವಾಗ ಅಧಿಕೃತ ರಸೀದಿ ಪಡೆಯಬೇಕಲ್ಲದೇ ಅದರಲ್ಲಿ ಲಾಟ್ ನಂಬರ್, ಮಾರಾಟ ಬೆಲೆ ವಿವರ ನಮೂದಿಸಿರಬೇಕು. ಮಾರಾಟ ಪರವಾನಗಿ ಹೊಂದಿಲ್ಲದ ಬಿಲ್ ನೀಡದೇ ಇರುವ ಅನ್ಯ ವ್ಯಕ್ತಿಗಳಿಂದ ಬಿತ್ತನೆ ಬೀಜ ಖರೀದಿ ಮಾಡದಂತೆ ರೈತರಿಗೆ ಸೂಚನೆ ನೀಡಿದರು.ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬೆಳೆಹಾನಿ ಉಂಟಾದಾಗ ಮಾರಾಟಗಾರರ ಹಾಗೂ ಉತ್ಪಾದಕರ ವಿರುದ್ಧ ಕಾನೂನು ಕ್ರಮ ಮತ್ತು ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಬಹುದು. ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸ ಪಡೆದುಕೊಳ್ಳವುದು ಉತ್ತಮ.
ಬಿತ್ತನೆ ಬೀಜವು ಸಂಬಂಧಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ದೃಢಿಕರಿಸಲಾಗಿದೆಯೇ? ದೃಡೀಕರಣ ಟ್ಯಾಗ್ ಲಗತ್ತಿಸಲಾಗಿದೆಯೇ? ಎಂದು ರೈತರು ಖಾತರಿಪಡಿಸಿಕೊಳ್ಳಬೇಕು. ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣ ಪರೀಕ್ಷಿಸಬೇಕು. ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ಬಳಕೆಗೆ ಯೋಗ್ಯದ(ವ್ಯಾಲಿಡಿಟಿ) ಅವಧಿ ಗಮನಿಸಬೇಕು. ಯಾವುದೇ ಮಾರಾಟಗಾರರಿಂದ ಬಿಡಿ ಬಿತ್ತನೆ ಬೀಜಗಳ ಖರೀದಿ ಮಾಡದಂತೆ ರೈತರಿಗೆ ಕರೆ ನೀಡಿರುವ ಅವರು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಕಚೇರಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.ರಸಗೊಬ್ಬರ ಬಳಕೆ ಬಗ್ಗೆ ಅಧಿಕಾರಿಗಳ ಸೂಚನೆಶಿಗ್ಗಾಂವಿ: ೨೦೨೫ರ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ತಾಲೂಕಿನ ರೈತರಿಗೆ ರಸಗೊಬ್ಬರ ಉಪಯುಕ್ತತೆ ಬಗ್ಗೆ ಕ್ರಮ ವಹಿಸಲು ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ್ ಗೇಜಲಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯುರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಿಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯವಾಗಿರುವ ಪೋಟ್ಯಾಷ್ ಲಭ್ಯವಿರುವುದಿಲ್ಲ.
ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ ೨೦:೨೦:೦:೧೩ ಹಾಗೂ ಪೋಟ್ಯಾಷ್ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ ೧೫:೧೫:೧೫, ೧೦:೨೬:೨೬, ೧೨:೩೨:೧೬, ೨೨:೨೨:೧೧, ೧೪:೩೫:೧೪, ೧೭:೧೭:೧೭, ೧೪:೨೮:೧೪, ೧೯:೧೯:೧೯, ೨೦:೧೦:೧೦ ಇತ್ಯಾದಿ ರಸಗೊಬ್ಬರಗಳನ್ನು ಸಹ ಬಳಸಬಹುದು ಎಂದು ತಿಳಿಸಿದ್ದಾರೆ.