ಸಾರಾಂಶ
ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶಕನ್ನಡಪ್ರಭ ವಾರ್ತೆ ಯಲಬುರ್ಗಾ
ಪ್ರತಿಯೊಬ್ಬ ಗ್ರಾಹಕರು ಯಾವುದೇ ವಸ್ತು ಖರೀದಿಸುವಾಗ ಅದರ ಗುಣಮಟ್ಟ ಹಾಗೂ ಕೊನೆಯ ಅವಧಿಯನ್ನು ಪರಿಶೀಲಿಸಿ ಕೊಂಡುಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.ಪಟ್ಟಣದ ಹಿಂದುಳಿದ ವರ್ಗಗಳ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ಕಾನೂನು ಸೇವೆಗಳ ಪ್ರಾಧಿಕಾರ ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತಾಪಂ, ಪಪಂ, ಶಿಶು ಅಭಿವೃದ್ಧಿ ಯೋಜನೆ, ಸಮಾಜ ಕಲ್ಯಾಣ, ಅಭಿಯೋಜನಾ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಖರೀದಿ ಹೆಚ್ಚಾಗುತ್ತಿದ್ದು, ಗ್ರಾಹಕರು ಜಾಗರೂಕತೆಯಿಂದ ವ್ಯವಹಾರ ಮಾಡಬೇಕು. ಪ್ರತಿಯೊಂದು ಖರೀಸಿದ ವಸ್ತುಗಳಿಗೆ ಬಿಲ್ಲನ್ನು ಹೊಂದಿರಬೇಕು. ಆಗ ನಿಮ್ಮ ಹಕ್ಕುನ್ನು ಚಲಾಯಿಸಲು ಸಾಧ್ಯ. ಖರೀರಿಸಿದ ವಸ್ತುವಿನಲ್ಲಿ ದೋಷವಿದ್ದು, ಆ ವಸ್ತುವನ್ನು ವಾಪಸ್ ತೆಗೆದುಕೊಂಡು ಹಣ ಹಿಂತಿರುಗಿಸಲು ಮಾರಾಟಗಾರ ನಿರಾಕರಿಸಿದ ಸಂದರ್ಭ ಗ್ರಾಹಕರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ ಸೂಕ್ತ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ ಎಂದರು.ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪೋಲಿಸಪಾಟೀಲ ಹಾಗೂ ಸಹಾಯಕ ಸರ್ಕಾರಿ ವಕೀಲ ರವಿ ಹುಣಸಿಮರದ ಮಾತನಾಡಿ, ಗ್ರಾಹಕರು ನ್ಯಾಯಾಲಯದಲ್ಲಿ ದೂರು ಸಲ್ಲಿಸುವಾಗ ದೂರುದಾರರ ಹೆಸರು, ವಿಳಾಸ, ವಿವರ, ಎದುರಿನ ಕಕ್ಷಿದಾರನ ಹೆಸರು, ವಿಳಾಸ ಮತ್ತು ವಿವರ ಯಾವ ಸಂದರ್ಭದಲ್ಲಿ ನ್ಯೂನತೆ ಸಂಭವಿಸಿದೆ ಎಂಬುದರ ಬಗ್ಗೆ ಮಾಹಿತಿ ಜತೆಗೆ ದೂರಿಗೆ ಸಂಬಂಧಿಸಿದ ಮಾಹಿತಿಗಳನ್ನೊಳಗೊಂಡ ದಾಖಲೆಗಳು ದೂರದಾರ ಅಪೇಕ್ಷಿಸುವ ಪರಿಹಾರದ ವಿಧ ಸಲ್ಲಿಸಬೇಕು ಎಂದು ಹೇಳಿದರು.
ತಹಸೀಲ್ದಾರ ಬಸವರಾಜ ತೆನ್ನಳ್ಳಿ ಮಾತನಾಡಿ, ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ರ ಪ್ರಕಾರ ಶೋಷಿತ ಗ್ರಾಹಕನಿಗೆ ನಾನಾ ಪರಿಹಾರಗಳು ದೊರೆಯುತ್ತವೆ ಎಂದರು.ವಕೀಲರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಬೇಲೇರಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪೋಲಿಸ್ ಪಾಟೀಲ, ನ್ಯಾಯವಾದಿ ಎ.ಎಂ. ಪಾಟೀಲ, ಶಿರಸ್ತೇದಾರ ಮಲ್ಲಿಕಾರ್ಜುನ ಶಾಸ್ತ್ರೀಮಠ, ರಾಘವೇಂದ್ರ ಕೋಳಿಹಾಳ ಇದ್ದರು.ಮಾಧವಿ ವೈದ್ಯ ಪ್ರಾರ್ಥಿಸಿದರು. ಭೀಮಣ್ಣ ಹವಳಿ ಸ್ವಾಗತಿಸಿದರು. ಜಯಲಕ್ಷ್ಮೀ ನಿರೂಪಿಸಿ, ಹನುಮಂತಗೌಡ ಪಾಟೀಲ ವಂದಿಸಿದರು.