ಸಾರಾಂಶ
ಅಳ್ನಾವರ:
ನಾಲ್ಕು ವರ್ಷದ ಹಿಂದೆ ಪ್ರವಾಹದಿಂದ ಒಡೆದು ಹಾನಿಯಾಗಿರುವ ಹುಲಿಕೇರಿ ಕೆರೆಯ ಎಡದಂಡೆ ಕಾಲುವೆಯನ್ನು ಡಿಸೆಂಬರ್ ಅಂತ್ಯದೊಳಗೆ ದುರಸ್ತಿ ಮಾಡಿಸಿ ರೈತರ ಜಮೀನುಗಳಿಗೆ ನೀರುಣಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ಸಚಿವ ಬೋಸರಾಜು ಭರವಸೆ ನೀಡಿದರು.ತಾಲೂಕಿನ ಹುಲಿಕೇರಿ ಇಂದ್ರಮ್ಮನ ಕೆರೆಗೆ ಮಂಗಳವಾರ ಭೇಟಿ ನೀಡಿದ ಅವರು, ಕೆರೆಯ ಕಟ್ಟೆಯ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾತನಾಡಿದರು. ಬಳಿಕ ರೈತರಿಂದ ಅಹವಾಲು ಆಲಿಸಿದರು. 2019ರಲ್ಲಿಯೇ ಕಾಲುವೆಗೆ ಹಾನಿಯಾಗಿದ್ದರು ದುರಸ್ತಿಗೆ ವಿಳಂಬ ಮಾಡಿರುವುದು ಏಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.
ಕಪ್ಪುಪಟ್ಟಿಗೆ ಸೇರಿಸಿ:ಈಗಾಗಲೇ ಟೆಂಡರ್‌ನಲ್ಲಿ ಭಾಗವಹಿಸಿ ಕಾಮಗಾರಿ ಮಾಡದ ಗುತ್ತಿಗೆದಾರರನ್ನು ಈ ಕ್ಷಣದಲ್ಲಿಯೇ ಕಪ್ಪುಪಟ್ಟಿಗೆ ಸೇರಿಸಿ ಹಾಗೂ ಅವರಿಗೆ ಇಲಾಖೆಯ ಯಾವ ಕಾಮಗಾರಿ ಸಿಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದ ಸಚಿವರು, ಎಡದಂಡೆ ಕಾಲುವೆ ದುರಸ್ತಿ ಮಾಡಿಸಿದರೆ ಸಾವಿರಾರು ಎಕರೆ ಜಮೀನಿಗೆ ಉಪಯೋಗವಾಗಲಿದೆ ಎಂಬ ಅಂಶವನ್ನು ಪ್ರಸ್ತಾಪಿಸಿ ಕೆಲಸದಲ್ಲಿ ನಿರ್ಲಕ್ಷ್ಯ ಮಾಡದೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಕೆರೆ ಗೇಟ್‌ಗಳ ದುರಸ್ತಿ, ಒಡೆದ ಕಾಲುವೆ ನಿರ್ಮಾಣ ಹಾಗೂ ಕೆರೆಯ ನೀರು ಹರಿದು ಕೊಚ್ಚಿ ಹೋಗಿರುವ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ತಡೆಗೋಡೆಯನ್ನು ತಕ್ಷಣ ನಿರ್ಮಿಸಲು ಕ್ರಮಕೈಗೊಳ್ಳಬೇಕು. ಇನ್ನುಳಿದಂತೆ ನೀರು ಜಮೀನುವರೆಗೂ ಹರಿಯಲು ಉಪ ಕಾಲುವೆ ಮತ್ತು ಮುಖ್ಯ ಕಾಲುವೆ ದುರಸ್ತಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಆದ್ಯತೆ ಮೇಲೆ ಮಾಡಿಸುವುದಾಗಿ ರೈತರಿಗೆ ಭರವಸೆ ನೀಡಿದರು.ಈ ಕೆರೆಗೆ ಅನುದಾನ ನೀಡುವಂತೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಒತ್ತಾಯಿಸಿದ್ದಾರೆ. ಈಗಾಗಲೇ ₹ 9 ಕೋಟಿ ವ್ಯಯಿಸಿದ್ದು ₹ 6 ಕೋಟಿ ವೆಚ್ಚದಲ್ಲಿ ಸೇತುವೆ ಕಾಲುವೆ ನಿರ್ಮಿಸಲು ಹಣ ಬಿಡುಗಡೆ ಮಾಡಿ ಟೆಂಡರ್ ಕರೆಯಲಾಗಿದೆ ಎಂದರು. ಟೆಂಡರ್ ಪಡೆದ ವ್ಯಕ್ತಿ ಉಪ ಗುತ್ತಿಗೆದಾರರಿಗೆ ಕಾಮಗಾರಿ ನೀಡುವಂತಿಲ್ಲ. ಇಂತಹ ಕಾರಣಗಳಿಂದ ನೀರಾವರಿ ಇಲಾಖೆಯಲ್ಲಿ ಈಗಾಗಲೆ 19 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ ಸಚಿವರು, ಕೆರೆಯ ಸಮಗ್ರ ಅಭಿವೃದ್ಧಿಗೆ ಲಾಡ್ ಅವರೊಂದಿಗೆ ಚರ್ಚಿಸಿ ಅಗತ್ಯವಿದ್ದರೆ ಹೆಚ್ಚುವರಿ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವು ಎಂದರು.
ಈ ವೇಳೆ ಕೆರೆಗೆ ಸಚಿವರು ಬಾಗಿನ ಅರ್ಪಿಸಿದರು. ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಇಲಾಖೆ ಕಾರ್ಯದರ್ಶಿ ರಾಘವನ, ಸಚಿವರ ಆಪ್ತ ಕಾರ್ಯದರ್ಶಿ ವೀರಭದ್ರ ಹಂಚಿನಾಳ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಪ್ರಶಾಂತ ತುರಕಾಣಿ, ಅಭಿಯಂತರಾದ ಶಿಗ್ಗಾಂವ, ಸೋಳಂಕೆ, ಆರ್.ಎಸ್. ಪಾಟೀಲ, ಸುರೇಶಗೌಡ ಕರಿಗೌಡ, ಶ್ರೀಕಾಂತ ಗಾಯಕವಾಡ, ಪಿ.ಎಂ. ಹರೀಶ ಇದ್ದರು.ರೈತರ ಪರವಾಗಿ ಸರ್ವೋದಯ ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವಾಜಿ ಡೊಳ್ಳಿನ, ಪಿಕಾರ್ಡ್ ಬ್ಯಡ್ಕ್‌ಕ ಅಧ್ಯಕ್ಷ ನಿಂಗಪ್ಪ ಬೇಕ್ವಾಡಕರ ಇನ್ನಿತರರು ಸಚಿವರಿಗೆ ಕೆರೆ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು.