2027 ರ ಜನವರಿಗೆ ನೇರರೈಲು ಮಾರ್ಗ ಕಾಮಗಾರಿ ಪೂರ್ಣ

| Published : Oct 03 2024, 01:20 AM IST

ಸಾರಾಂಶ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಹಾಗೂ ಪಾವಗಡ-ರಾಯದುರ್ಗ ನೂತನ ರೈಲ್ವೆ ಮಾರ್ಗ ಯೋಜನೆ 2027ರ ಜನವರಿಯೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಆಶ್ವಾಸನೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಹಾಗೂ ಪಾವಗಡ-ರಾಯದುರ್ಗ ನೂತನ ರೈಲ್ವೆ ಮಾರ್ಗ ಯೋಜನೆ 2027ರ ಜನವರಿಯೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಆಶ್ವಾಸನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೂತನ ರೈಲ್ವೆ ಮಾರ್ಗಗಳ ಭೂಸ್ವಾಧೀನ ಪ್ರಕ್ರಿಯೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

₹2140 ಕೋಟಿ ವೆಚ್ಚದಲ್ಲಿ ನೂತನ ರೈಲ್ವೆ ಮಾರ್ಗಗಳ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಈ ಮೊದಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಶೇ.50-50 ಅನುಪಾತದಲ್ಲಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಇದನ್ನು ಬದಲಿಸಿ ರಾಜ್ಯ ಸರ್ಕಾರ ಭೂ ಸ್ವಾಧೀನ ವೆಚ್ಚವನ್ನು ಭರಿಸಿ, ಯೋಜನೆಗೆ ಭೂಮಿ ಹಸ್ತಾಂತರಿಸಿದರೆ ರೈಲ್ವೆ ಇಲಾಖೆಯಿಂದಲೇ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.ಎರಡು ನೂತನ ರೈಲ್ವೆ ಮಾರ್ಗಗಳಿಗೆ 2409 ಎಕರೆ ಭೂಮಿ ಅವಶ್ಯಕತೆ ಇದ್ದು, ಇದರಲ್ಲಿ ಕೇವಲ 280 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ರೈಲ್ವೆ ಮಾರ್ಗಕ್ಕೆ ಈಗಾಗಲೆ ₹1100 ಕೋಟಿ ಅನುದಾನ ಒದಗಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಧಾನಮಂತ್ರಿಗಳ ಸೂಚನೆಯಂತೆ 2027ರ ಜನವರಿ ವೇಳೆಗೆ ನೂತನ ರೈಲ್ವೆ ಮಾರ್ಗಗಳ ನಿರ್ಮಾಣ ಮಾಡಿ, ಪ್ರಧಾನಮಂತ್ರಿ ಹಾಗೂ ರೈಲ್ವೆ ಖಾತೆ ಸಚಿವರಿಂದ ಲೋಕಾರ್ಪಣೆ ಮಾಡುವುದಾಗಿ ಸಚಿವ ವಿ. ಸೋಮಣ್ಣ ತಿಳಿಸಿದರು.ಪ್ರಸ್ತುತ ನೂತನ ರೈಲ್ವೆ ಮಾರ್ಗಗಳನ್ನು ನಿರ್ಮಾಣ ಮಾಡುವ ವೇಳೆ, ರೈಲ್ವೆ ಕೆಳ ಸೇತುವೆ ನಿರ್ಮಾಣದ ಬದಲಿಗೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಚಿವ ವಿ. ಸೋಮಣ್ಣ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆ ನೀರು ಸಂಗ್ರಹಗೊಂಡು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿರುವ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ರೈಲ್ವೆ ಕೆಳಸೇತುವೆ ದುರಸ್ತಿ ಕಾರ್ಯವನ್ನು ಸಂಸದ ಗೋವಿಂದ ಎಂ. ಕಾರಜೋಳ ಅವರ ಸಲಹೆ ಪಡೆದು, ರೈಲ್ವೆ ಕೆಳ ಸೇತುವೆಗಳ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನೇರ ರೈಲ್ವೆ ಮಾರ್ಗ ಯೋಜನೆಯ ದಾವಣಗೆರೆ- ಭರಮಸಾಗರ-ಚಿತ್ರದುರ್ಗ ಮಧ್ಯದಲ್ಲಿ ಭೂಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಇನ್ನೂ 1 ತಿಂಗಳ ಬಳಿಕ ಬೆಳೆ ಕಟಾವು ನಂತರ ರೈಲ್ವೆ ಕಾಮಗಾರಿಗಳನ್ನು ಆರಂಭಿಸುವಂತೆ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರಾದ ಎಂ. ಚಂದ್ರಪ್ಪ, ಟಿ. ರಘುಮೂರ್ತಿ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ನೇರ ರೈಲ್ವೆ ಮಾರ್ಗ ಭೂಸ್ವಾಧೀನಾಧಿಕಾರಿ ವೆಂಕಟೇಶ್, ಬೆಂಗಳೂರು ಕಂಟೋನ್‍ಮೆಂಟ್ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಸಂದೀಪ್ ಶರ್ಮಾ, ಮುಖ್ಯ ಎಂಜಿನಿಯರ್ಗಳಾದ ಪ್ರದೀಪ್ ಪುರಿ, ಸಂಜಯ್ ಬನ್ಸಾರಿ, ವಿಭಾಗೀಯ ಎಂಜಿನಿಯರ್ ರಜತ್, ಮೈಸೂರು ರೈಲು ವಿಭಾಗದ ಮಂಡಲ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಕಲಗೊಂಡ, ತಹಸೀಲ್ದಾರ್ ಡಾ. ನಾಗವೇಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

156 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 1211 ಎಕರೆ ಭೂ ಸ್ವಾಧೀನಕ್ಕೆ ರೈಲ್ವೆ ಇಲಾಖೆಯಿಂದ ಕೋರಲಾಗಿತ್ತು. ಇದುವರೆಗೆ 1026 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಭರಮಸಾಗರ-ಚಿತ್ರದುರ್ಗ, ಚಿತ್ರದುರ್ಗ-ಹಿರಿಯೂರು ಹಾಗೂ ಹಿರಿಯೂರು-ತಾವರಕೆರೆ ನಡುವೆ ಮೂರು ಹಂತದಲ್ಲಿ ಭೂಸ್ವಾಧೀನ ನಡೆಸಲಾಗುತ್ತಿದೆ. ಒಟ್ಟು 156 ಎಕರೆ ಭೂಸ್ವಾಧೀನ ಮಾಡುವ ಅಂತಿಮ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೇ.90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಹಂತಗಳಲ್ಲಿ ರೈಲ್ವೆ ಇಲಾಖೆಯಿಂದ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆಯಲ್ಲಿ ಮಾಹಿತಿ ನೀಡಿದರು.