ಕಳಲೆ ಲಕ್ಷ್ಮಿಕಾಂತಸ್ವಾಮಿ ಜಾತ್ರಾ ಮಹೋತ್ಸವ

| Published : Mar 19 2025, 12:33 AM IST

ಸಾರಾಂಶ

ಸುತ್ತಮುತ್ತಲಿನ ಗ್ರಾಮಗಳಿಂದ ಜಾತ್ರೆಗಾಗಿ ಆಗಮಿಸಿದ್ದ ಭಕ್ತಾದಿಗಳು ರಥವನ್ನು ಶ್ರದ್ದಾ ಭಕ್ತಿಯಿಂದ ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದರು

ಕನ್ನಡಪ್ರಭ ವಾರ್ತೆ ನಂಜನಗೂಡು

ತಾಲೂಕಿನ ಕಳಲೆ ಗ್ರಾಮದ ಪುರಾಣ ಪ್ರಸಿದ್ದ ಐತಿಹಾಸಿಕ ದೇವಾಲಯಗಳಲ್ಲಿ ಒಂದೆನಿಸಿರುವ ಶ್ರೀ ಲಕ್ಷ್ಮಿಕಾಂತಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿಕಾಂತ ಸ್ವಾಮಿಯವರ ರಥೋತ್ಸವವು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಮಂಗಳವಾರ ಮುಂಜಾನೆಯಿಂದಲೇ ಶ್ರೀ ಲಕ್ಷ್ಮಿಕಾಂತ ಸ್ವಾಮಿಯವರಿಗೆ ಕ್ಷಿರಾಭಿಷೇಕ, ಫಲ-ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ರೀತಿಯ ಪೂಜೆಗಳನ್ನು ಸಮರ್ಪಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಬೆಳಗ್ಗೆ 6 ರಿಂದ 6.15 ಗಂಟೆಯೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ವಜ್ರ-ವೈಡೂರ್ಯಗಳಿಂದ ಅಲಂಕೃತವಾದ, ಶ್ರೀಲಕ್ಷ್ಮಿಕಾಂತಸ್ವಾಮಿಯವರ ಉತ್ಸವ ಮೂರ್ತಿಯನ್ನು ರಥೋತ್ಸದಲ್ಲಿ ಪ್ರತಿಷ್ಠಾಪಿಸಲಾಯಿತು.

ನಂತರ ಮಹಾಮಂಗಳಾರತಿ ನೆರವೇರಿಸಿ, ಪೂಜಿ ಸಲ್ಲಿಸಿದ ಬಳಿಕ ಬೆಳಗ್ಗೆ 8:15 ರಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮತ್ತು ದೇವಾಲಯದ ಪಾರು ಪತ್ತೆದಾರ್ ಜಯರಾಮ್ ಅವರು ರಥದ ಚಕ್ರಕ್ಕೆ ಇಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಸುತ್ತಮುತ್ತಲಿನ ಗ್ರಾಮಗಳಿಂದ ಜಾತ್ರೆಗಾಗಿ ಆಗಮಿಸಿದ್ದ ಭಕ್ತಾದಿಗಳು ರಥವನ್ನು ಶ್ರದ್ದಾ ಭಕ್ತಿಯಿಂದ ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದರು. ರಥವು ಗ್ರಾಮದ ಬೀದಿಗಳಲ್ಲಿ ಚಲಿಸುವಾಗ ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಕೋರಿ ಹರಕೆ ಕಟ್ಟಿಕೊಂಡು ಹಣ್ಣು ಧವನ ಎಸೆದು ಭಕ್ತಿ ಮೆರೆದರು. ರಥೋತ್ಸವು ಯಾವುದೇ ಅಡಚಣೆಯಿಲ್ಲದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಸ್ಥಾನ ಸೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಸುತ್ತಮುತ್ತ ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಲ್ಲದೆ ರಥವನ್ನು ವಿವಿಧ ಬಗೆಯ ಬಣ್ಣದ ಬಟ್ಟೆಯ ಬಾವುಟಗಳಿಂದ ಹಾಗೂ ನಾನಾ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ರಥ ಚಲಿಸುವ ಮಾರ್ಗದಲ್ಲಿ ರಂಗೋಲೆ ಬಿಡಿಸಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಲ್ಲದೆ ಜಾತ್ರಾ ಮಹೋತ್ಸವದ ಅಂಗವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ದೇವಾಲಯದ ಜೀರ್ಣೋದ್ಧಾರಕ್ಕೆ ಒತ್ತಾಯ

ದೇವಾಲಯದ ಪಾರುಪತ್ತೆದಾರ್ ಜಯರಾಮು ಮಾತನಾಡಿ, ಶ್ರೀ ಲಕ್ಷ್ಮಿಕಾಂತ ಸ್ವಾಮಿಯವರ ದೇವಾಲಯವು ಐತಿಹಾಸಿಕ ಪೌರಾಣಿಕ ಹಿನ್ನೆಲೆವುಳ್ಳ ದೇವಾಲಯಗಳಲ್ಲಿ ಒಂದೆನಿಸಿದೆ, ಈ ದೇವಾಲಯ ಮತ್ತು ರಥವು ಶಿಥಿಲಾವಸ್ಥೆಯಲ್ಲಿದೆ. ಈ ದೇವಾಲಯವು ಶ್ರೀಕಂಠೇಶ್ವರ ದೇವಾಲಯದ ಅಧೀನದಲ್ಲಿ ಬರುವುದರಿಂದ ಪುರಾತನ ದೇವಾಲಯಗಳನ್ನು ಉಳಿಸುವ ಸಲುವಾಗಿ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಿ ಶ್ರೀಕಂಠೇಶ್ವರ ದೇವಾಲಯದ ಅನುದಾನವನ್ನು ಬಳಸಿಕೊಂಡು ಈ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನು ಮಾಡಬೇಕು ಜೊತೆಗೆ ಮುಂದಿನ ವರ್ಷದ ಜಾತ್ರೆಯ ವೇಳೆಗೆ ಶಿಥಿಲಾವಸ್ಥೆಯಲ್ಲಿರುವ ರಥವನ್ನು ಕೂಡ ಜೀರ್ಣೋದ್ಧಾರ ಕಾರ್ಯ ಮಾಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಟಿಪ್ಪು ಸುಲ್ತಾನ್‌ ರಿಂದ ಬೆಳ್ಳಿ ಪಾತ್ರೆ ಕೊಡುಗೆ

ದಳವಾಯಿಗಳ ಆಡಳಿತಾವಧಿಯಲ್ಲಿ ಟಿಪ್ಪು ಸುಲ್ತಾನ್ ಈ ದೇವಾಲಯಕ್ಕೆ ಬೆಳ್ಳಿ ಪಾತ್ರೆಗಳನ್ನು ನೀಡುವ ಮೂಲಕ ದೇವಾಲಯವನ್ನು ಪ್ರೋತ್ಸಾಹಿಸಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದು.

ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ತೇರಡಿ ಉತ್ಸವವು ವಿಜೃಂಭಣೆಯಿಂದ ಜರುಗುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

ರಥೋತ್ಸವದ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಲಕ್ಷ್ಮಿಕಾಂತ ದೇವಾಲಯ ಪಾರುಪತ್ತೆದಾರ್ ಜಯರಾಮು, ಕಳಲೆ ಗ್ರಾಪಂ ಅಧ್ಯಕ್ಷ ಮಹೇಶ್, ಮುಖಂಡರಾದ ರವಿಕುಮಾರ್, ರಾಜೇಶ ಹಾಗೂ ಕಳಲೆ ಗ್ರಾಮದ ಗ್ರಾಮಸ್ಥರು, ಯಜಮಾನರು ಇದ್ದರು.