ಸಾರಾಂಶ
ಯಾದಗಿರಿ ಸಮೀಪದ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಮತ್ತು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅಬ್ಬೆತುಮಕೂರಿನ ಮಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಆರ್ಶಿವಚನ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಪುರಾಣ ಪ್ರವಚನ, ಪುಣ್ಯಕಥೆ ಆಲಿಸುವುದರಿಂದ ಪ್ರತಿಯೊಬ್ಬರ ಮನಸ್ಸು ಶುದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಬ್ಬೆತುಮಕೂರಿನ ಮಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ನುಡಿದರು.ಇಲ್ಲಿನ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಮತ್ತು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯರು ಸಾಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾರೆ. ಸಂಸಾರ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂತಹ ಬೇಸರ ದೂರ ಮಾಡಿ ಶಾಂತಿ, ಸಹನೆ, ತಾಳ್ಮೆ ಮೂಡಬೇಕಾದರೆ ಪುರಾಣ ಕೇಳುವುದರಿಂದ ಅದು ಸಾಧ್ಯವಾಗುತ್ತದೆ ಎಂದರು.
ವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಮಹಾಂತರು. ಎಲ್ಲರಂತೆ ಅವರು ಕೂಡ ಸಂಸಾರಿಕ ಜೀವನದಲ್ಲಿದ್ದರೂ ಕೂಡ ಜಲಪತ್ರದ ಮೇಲಿನ ಬಿಂದುವಿನಂತೆ ಅವರು ಎಂದೂ ಸಂಸಾರಕ್ಕೆ ಅಂಟಿಕೊಳ್ಳಲಿಲ್ಲ. ನಶ್ವರ ಸಾಂಸಾರಿಕ ಜೀವನ ನಚ್ಚಿಕೊಳ್ಳದೆ ಪಾರಮಾರ್ಥಿಕ ಬದುಕಿನಲ್ಲಿ ಓಲಾಡಿ ಸಾಧನೆ ಸಿದ್ಧಿ ಮೆರೆದ ಸಿದ್ಧಿಪುರುಷರಾಗಿದ್ದರು ಎಂದರು.ಇಂತಹ ಮಹಾಮಹಿಮನ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಶ್ರೀ ವಿಶ್ವಾರಾಧ್ಯರ ಪುರಾಣ ನಿರಂತರವಾಗಿ 11 ದಿನಗಳ ಕಾಲ ನಡೆಯಲಿದ್ದು, ಎಲ್ಲ ಭಕ್ತಾದಿಗಳು ಪ್ರತಿದಿನ ಪುರಾಣ ಆಲಿಸುವುದರ ಮೂಲಕ ತಮ್ಮ ತನು-ಮನ ಶುದ್ಧ ಗೊಳಿಸಿಕೊಳ್ಳಬೇಕೆಂದರು.
ಪುರಾಣ ಪ್ರಾರಂಭೋತ್ಸವದ ನಿಮಿತ್ತ ಮುತೈದೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಲಾಯಿತು. ಖ್ಯಾತ ಪುರಾಣ ಪ್ರವಚನಕಾರರಾದ ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ, ಪುರಾಣದ ಮೊದಲ ಅಧ್ಯಾಯ ವಾಚನ ಮಾಡುವುದರ ಮೂಲಕ ಪುರಾಣ ಪ್ರಾರಂಭಿಸಿದರು.ಡಾ. ಸುಭಾಶ್ಚಂದ್ರ ಕೌಲಗಿ ಸೇರಿದಂತೆ ಅಬ್ಬೆತುಮಕೂರು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪುರಾಣ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.