ಸಾರಾಂಶ
ಬ್ಯಾಡಗಿ: ಪತ್ರಿಕೆಗಳನ್ನು ಓದುವುದರಿಂದ ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳಾಗಲು ಸಾಧ್ಯ, ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಪತ್ರಿಕೆಗಳು ಸಹಕಾರಿಯಾಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕೆಪಿಎಸ್ ಎಸ್.ಎಸ್.ಜೆ.ಜೆ.ಎಂ. ಕಾಲೇಜು ಆವರಣದಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ದಿನಪತ್ರಿಕೆ ಇವರ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬ್ಯಾಡಗಿ ಇವರ ಸಹಕಾರದೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಈ ಮೊದಲು ಕೇವಲ ಸುದ್ದಿಗಾಗಿ ಸೀಮಿತವಾಗಿದ್ದ ಪತ್ರಿಕೆಗಳು ಇದೀಗ ಸಾಮಾಜಿಕ ಹೊಣೆಗಾರಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ. ವಿದ್ಯಾದರ್ಶಿನಿ, ಶಿಕ್ಷಣ ಮಾರ್ಗದರ್ಶಿ ಇತ್ಯಾದಿ ಅಂಕಣಗಳನ್ನು ಪ್ರಾರಂಭಿಸುವ ಮೂಲಕ ಎಸ್.ಎಸ್.ಎಲ್.ಸಿ. ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಕುರಿತು ಅಗತ್ಯವಾದ ಮಾಹಿತಿಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು.
ಇಷ್ಟಪಟ್ಟು ಓದಬೇಕು: ಅಧ್ಯಕ್ಷತೆ ವಹಿಸಿದ್ದ ಎಸ್.ಜೆ.ಜೆ.ಎಂ.ಕಾಲೇಜು ಪ್ರಾಚಾರ್ಯ ಡಾ. ಮಾಲತೇಶ ಬಂಡೆಪ್ಪನವರ ಮಾತನಾಡಿ, ವಿದ್ಯೆ ಎಂಬುದನ್ನು ನಾವು ಶಾಲೆಗಳಿಂದಲೇ ಪಡೆದುಕೊಳ್ಳಬೇಕು ಶಿಕ್ಷಕರು ನೀಡುವ ವಿದ್ಯೆಯನ್ನು ಇನ್ನೊಬ್ಬರಿಗೆ ಹಂಚುವ ಪ್ರಮೇಯ ಬರುವುದಿಲ್ಲ, ವಿದ್ಯಾರ್ಥಿಗಳು ಕಷ್ಟುಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು, ಎಸ್.ಎಸ್.ಎಲ್.ಸಿ. ಪ್ರಮಖ ಘಟ್ಟವಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ಇದೀಗ ಸ್ಪರ್ಧಾತ್ಮಕ ಶಿಕ್ಷಣ: ಕೆಪಿಎಸ್ ಉಪಪ್ರಾಚಾರ್ಯ ಜಯರಾಜ ಎಲ್.ಆರ್. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಶಿಕ್ಷಣದ ಯುಗವು ಆರಂಭವಾಗಿದೆ. ಅಂಕಗಳನ್ನು ಗಳಿಸುವುದರಲ್ಲಿ ನಾಮುಂದು ತಾಮುಂದು ಎನ್ನುವಂತಾಗಿದೆ. ಹೀಗಾಗಿ ಹತ್ತು ಹಲವು ಆಯಾಮಗಳಿಂದ ಶಿಕ್ಷಣ ಪಡೆದುಕೊಳ್ಳುವ ಮೂಲಕ ಶೈಕ್ಷಣಿಕ ಸ್ಪರ್ಧೆಯಲ್ಲಿ ವಿಜೇತರಾಗಬೇಕಾಗಿದೆ ಎಂದರು.
ಕಾರ್ಯಾಗಾರದಲ್ಲಿ ಮೂರು ಶಾಲೆಗಳಿಂದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಸ್.ಎಸ್.ಪಿ.ಎನ್.ಪ್ರೌಢಶಾಲೆ ಉಪಪ್ರಾಚಾರ್ಯ ಸುಭಾಸ್ ಎಲಿ, ಕನ್ನಡಪ್ರಭ ದಿನಪತ್ರಿಕೆ ತಾಲೂಕು ವರದಿಗಾರ ಶಿವಾನಂದ ಮಲ್ಲನಗೌಡ್ರ, ಶಿಕ್ಷಕರಾದ ಈರಣ್ಣ ಅಕ್ಕಿ, ವೈ.ಟಿ. ಹೆಬ್ಬಳ್ಳಿ, ಹಾಗೂ ಗಣಿತ ಮತ್ತು ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.