ಸಾರಾಂಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಮುಂದಿನ ಡಿಸೆಂಬರ್ ಅಂತ್ಯದ ವೇಳೆಗೆ ಶಿಗ್ಗಾಂವಿ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಲ್ಲಿ ನೀರು ಕೊಡುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ತಾಲೂಕಿನ ತಡಸ ಗ್ರಾಮದಲ್ಲಿ ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ೨೦೨೨-೨೩ನೇ ಸಾಲಿನ ಜಲ ಜೀವನ ಮಿಷನ್ ಅಡಿ ಮನೆ ಮನೆಗೆ ಗಂಗೆ ಯೋಜನೆ ಅಡಿಯಲ್ಲಿ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕುಡಿಯುವ ನೀರು ಒದಗಿಸಲು ನೈಸರ್ಗಿಕ ಕಾರಣದಿಂದ ಅನೇಕ ಸಮಸ್ಯೆಗಳು ಇವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಎರಡು ಬಾರಿ ಪ್ರಸ್ತಾಪ ಮಾಡಿದ್ದರೂ, ಜಾರಿಗೆ ತರಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ನಮಗೆ ವರವಾಗಿ ಬಂದಿದ್ದು ಪ್ರಧಾನಿ ನರೇಂದ್ರ ಮೋದಿಯವರ ಜಲ ಜೀವನ್ ಮಿಷನ್ ಯೋಜನೆ. ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡೂ ಹಣ ನೀಡುತ್ತವೆ. ಶಿಗ್ಗಾಂವಿ, ಸವಣೂರು, ಹಾನಗಲ್ ಮೂರು ತಾಲೂಕಿನ ವ್ಯಾಪ್ತಿಯಲ್ಲಿ ₹೪೩೮ ಕೋಟಿ ವೆಚ್ಚದ ಜಲ ಜೀವನ್ ಮಿಷನ್ ಯೋಜನೆ ಇದೆ. ಅದರಲ್ಲಿ ಸುಮಾರು ₹ಮೂರು ಕೋಟಿ ತಡಸ ಗಾಮಕ್ಕೆ ನೀಡಲಾಗಿದ್ದು, ಸುಮಾರು ೨೫೦೦ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಈ ರಾಜ್ಯದಲ್ಲಿ ಬಹುತೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಸೌಲಭ್ಯ ಇರಲಿಲ್ಲ. ಕರ್ನಾಟಕದಲ್ಲಿ ೨೫ ವರ್ಷದಲ್ಲಿ ೨೫ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕೇವಲ ಮೂರು ವರ್ಷದಲ್ಲಿ ೩೦ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಕೀರ್ತಿ ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಜಲ ಜೀವನ್ ಮಿಷನ್ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಡೀ ದೇಶದಲ್ಲಿ ಮನೆ ಮನೆಗೆ ನಳದ ಮೂಲಕ ನೀರನ್ನು ಕೊಡುವ ಮೂಲಕ ಯೋಜನೆಯನ್ನು ರೂಪಿಸಲಾಗಿದೆ. ದೇಶದಲ್ಲಿ ₹೩ ಲಕ್ಷ ೬೪ ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಶೇ. ೫೦ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ನೀಡಬೇಕಾಗಿದೆ. ಇದನ್ನು ಆಗಿನ ಮುಖ್ಯ ಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ತಕ್ಷಣ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರಜೀಯಾ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಭು ನಂಜಪ್ಪನವರ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ ಹಾಗೂ ಗ್ರಾಪಂ ಸದಸ್ಯರು, ವಿವಿಧ ಮುಖಂಡರು, ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು. ನ್ಯಾಯವಾದಿ ಹಾಗೂ ಸದಸ್ಯ ಅಬ್ದುಲ್ ಮಜೀದ ಕೋಲ್ಲಾಪೂರ ಸ್ವಾಗತಿಸಿ, ನಿರೂಪಿಸಿದರು.