ದೇವಿಯ ಆರಾಧನೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಮನುಷ್ಯನ ಬದುಕಿನಲ್ಲಿ ಭಕ್ತಿ, ಶ್ರದ್ಧೆ, ಸಂಸ್ಕಾರ ಹಾಗೂ ಸತ್ಕಾರ್ಯಗಳ ಮಹತ್ವವನ್ನು ಸಾರುತ್ತದೆ. ದೇವಿಯ ಕೃಪೆ ಮತ್ತು ಆರಾಧನೆಯ ಮೂಲಕ ಮನುಷ್ಯನಲ್ಲಿ ಧರ್ಮದ ಹಾದಿಯಲ್ಲಿ ನಡೆಯುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ಬಿಜಾಪುರ ಜಿಲ್ಲೆಯ ಕೋಲಾರ-ಬೇಲೂರ ಪಟ್ಟದೇವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶಿಗ್ಗಾಂವಿ: ದೇವಿಯ ಆರಾಧನೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಮನುಷ್ಯನ ಬದುಕಿನಲ್ಲಿ ಭಕ್ತಿ, ಶ್ರದ್ಧೆ, ಸಂಸ್ಕಾರ ಹಾಗೂ ಸತ್ಕಾರ್ಯಗಳ ಮಹತ್ವವನ್ನು ಸಾರುತ್ತದೆ. ದೇವಿಯ ಕೃಪೆ ಮತ್ತು ಆರಾಧನೆಯ ಮೂಲಕ ಮನುಷ್ಯನಲ್ಲಿ ಧರ್ಮದ ಹಾದಿಯಲ್ಲಿ ನಡೆಯುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ಬಿಜಾಪುರ ಜಿಲ್ಲೆಯ ಕೋಲಾರ-ಬೇಲೂರ ಪಟ್ಟದೇವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶಿಗ್ಗಾಂವಿ ತಾಲೂಕಿನ ಬನ್ನೂರು ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿಯ ಪುರಾಣ ಕಾರ್ಯಕ್ರಮದ ನಾಲ್ಕನೇ ದಿನದ ಪ್ರವಚನದಲ್ಲಿ ಮಾತನಾಡಿದ ಅವರು, ಗ್ರಾಮದೇವತೆಗಳು ಗ್ರಾಮಗಳ ಧಾರ್ಮಿಕ ಪರಂಪರೆ, ಜನರ ನಂಬಿಕೆ ಹಾಗೂ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾಗಿವೆ. ಗ್ರಾಮದೇವಿಯ ಆರಾಧನೆಯು ಗ್ರಾಮಸ್ಥರಲ್ಲಿ ಒಗ್ಗಟ್ಟು, ಪರಸ್ಪರ ಪ್ರೀತಿ, ಸಹಕಾರ ಹಾಗೂ ಸಾಮರಸ್ಯದ ಭಾವನೆಗಳನ್ನು ಬಲಪಡಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹಿರಿಯರ ಸಂಸ್ಕಾರ, ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ಪರಿಚಯವಾಗುತ್ತವೆ. ಆದ್ದರಿಂದ ಇಂದಿನ ಯುವಜನತೆ ಧಾರ್ಮಿಕ ಪರಂಪರೆಯ ಮಹತ್ವವನ್ನು ಅರಿತು, ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸಿದ್ದಯ್ಯಸ್ವಾಮಿ ಮಳಸಾಪೂರ ಅವರು ಸಂಗೀತ ಸೇವೆ ಸಲ್ಲಿಸಿದರೆ, ಶಿವಕುಮಾರ ಕಟ್ಟಿಸಂಗಾವಿ ಅವರು ತಬಲಾ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ದೇವಿಯ ಪುರಾಣ ಪ್ರವಚನವು ಭಕ್ತರಿಗೆ ಧಾರ್ಮಿಕ ಜ್ಞಾನವನ್ನು ನೀಡುವುದರ ಜೊತೆಗೆ, ಜೀವನದಲ್ಲಿ ಸತ್ಯ, ಧರ್ಮ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಪಾಲಿಸುವ ಪ್ರೇರಣೆಯನ್ನೂ ನೀಡುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಭಕ್ತಿಯ ವಾತಾವರಣ ನಿರ್ಮಿಸಿ, ಸಮಾಜದಲ್ಲಿ ಸೌಹಾರ್ದತೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಪ್ರಭುಕುಮಾರ ಶಿವಾಚಾರ್ಯರು ಹೇಳಿದರು.