ಬ್ಯಾಡಗಿ ಮಾರುಕಟ್ಟೆಗೆ ಒಂದೂವರೆ ಲಕ್ಷ ದಾಟಿದ ಮೆಣಸಿನಕಾಯಿ ಆವಕ: ದರದಲ್ಲಿ ಸ್ಥಿರತೆ

| Published : Jan 23 2024, 01:47 AM IST

ಬ್ಯಾಡಗಿ ಮಾರುಕಟ್ಟೆಗೆ ಒಂದೂವರೆ ಲಕ್ಷ ದಾಟಿದ ಮೆಣಸಿನಕಾಯಿ ಆವಕ: ದರದಲ್ಲಿ ಸ್ಥಿರತೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆವಕಿನಲ್ಲಿ ಹೆಚ್ಚಳವಾಗಿ ಸೋಮವಾರದಂದು 1.68 ಲಕ್ಷ ಚೀಲ ಸಮೀಪಿಸಿದ್ದು ಮಾರಾಟದ ದರದಲ್ಲಿ ಕಡ್ಡಿ ಡಬ್ಬಿ ಮತ್ತು ಗುಂಟೂರು ತಳಿಗಳು ಸ್ಥಿರತೆ ಕಾಯ್ದುಕೊಂಡಿವೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆವಕಿನಲ್ಲಿ ಹೆಚ್ಚಳವಾಗಿ ಸೋಮವಾರದಂದು 1.68 ಲಕ್ಷ ಚೀಲ ಸಮೀಪಿಸಿದ್ದು ಮಾರಾಟದ ದರದಲ್ಲಿ ಕಡ್ಡಿ ಡಬ್ಬಿ ಮತ್ತು ಗುಂಟೂರು ತಳಿಗಳು ಸ್ಥಿರತೆ ಕಾಯ್ದುಕೊಂಡಿವೆ.

ಕಳೆದ ಮೂರ‍್ನಾಲ್ಕು ವಾರಗಳಲ್ಲಿ ಲಕ್ಷದ ಆಸುಪಾಸಿನಲ್ಲಿದ್ದ ಮೆಣಸಿನಕಾಯಿ ಚೀಲಗಳ ಆವಕವು ಇಂದು ಮತ್ತೆ ಚೇತರಿಕೆ ಕಂಡುಕೊಂಡು (168489 ಚೀಲ) ಒಂದೂವರೆ ಲಕ್ಷದ ಗಡಿ ದಾಟಿದೆ. ರಾಮಮಂದಿರ ಉದ್ಘಾಟನೆ ಮತ್ತು ಲಾರೀ ಮಾಲೀಕರ ಸಂಘದ ಪ್ರತಿಭಟನೆ ಇವುಗಳ ಬೆನ್ನಲ್ಲೇ ಆವಕಿನಲ್ಲಿ ಇಳಿಮುಖವಾಗುವ ಎಲ್ಲಾ ಸಾಧ್ಯತೆಗಳಿದ್ದವು ಆದರೆ ಇದ್ಯಾವುದನ್ನೂ ಲೆಕ್ಕಸದೇ ನಿರೀಕ್ಷೆಗಿಂತ ಹೆಚ್ಚು ಆವಕವಾಗಿದ್ದು ಸ್ಥಳೀಯ ವರ್ತಕರಲ್ಲಿ ಹುಮ್ಮಸ್ಸನ್ನು ಮೂಡಿಸಿದೆ.

ಬೆಳಗ್ಗೆ 8 ಗಂಟೆಗೆ ಟೆಂಡರ್ ಆರಂಭ: ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಟೆಂಡರ್ ಸಮಯವನ್ನು ಬದಲಾವಣೆ ಮಾಡಿದ್ದ ಸ್ಥಳೀಯ ವರ್ತಕರ ಸಂಘವು 10ರಿಂದ 2 ರ ಬದಲಾಗಿ 8 ರಿಂದ 12 ರವರೆಗೆ ನಿಗದಿಗೊಳಿಸಿತ್ತು. ಹೀಗಾಗಿ ಇನ್ನೂ ಸುಮಾರು 25ರಿಂದ 30 ಸಾವಿರದಷ್ಟು ಚೀಲಗಳು ನಿಗದಿತ ಸಮಯಕ್ಕೆ ಮಾರುಕಟ್ಟೆ ತಲುಪಲು ಸಾಧ್ಯವಾಗಲ್ಲಿಲ್ಲ. ಹೀಗಾಗಿ ಅನ್‌ಲೋಡ್ ಆಗದೇ ಹೊತ್ತು ತಂದಿದ್ದ ಲಾರಿಗಳಲ್ಲೇ ಉಳಿಯುವಂತಾಯಿತು.

ದರದಲ್ಲಿ ಸ್ಥಿರತೆ: ಕಡ್ಡಿತಳಿ ಪ್ರತಿ ಕ್ವಿಂಟಲ್‌ಗೆ ಸರಾಸರಿ ₹37 ಸಾವಿರಗಳಿಗೆ ಮಾರಾಟವಾದರೇ ಡಬ್ಬಿತಳಿ ಸರಾಸರಿ ₹40 ಸಾವಿರ ಹಾಗೂ ಗುಂಟೂರ ತಳಿ ₹14 ಸಾವಿರ ಸರಾಸರಿ ದರದಲ್ಲಿ ಬಿಕರಿಗೊಂಡವು. ಗುಣಮಟ್ಟದ ಕಡ್ಡಿ ತಳಿ ಅತೀ ಹೆಚ್ಚು ₹50 ಸಾವಿರ ಡಬ್ಬಿತಳಿ ₹62 ಸಾವಿರಕ್ಕೆ ಮಾರಾಟವಾಗಿದ್ದು ದರದಲ್ಲಿ ಮಾತ್ರ ಸ್ಥಿರತೆ ಕಾಯ್ದುಕೊಂಡಿವೆ.

ಮಾರುಕಟ್ಟೆ ಆವಕ ಹೆಚ್ಚಾಗುತ್ತಿದ್ದಂತೆ ಮತ್ತೊಂದೆಡೆ ಮೆಣಸಿನಕಾಯಿ ಖರೀದಿಸಲು ವರ್ತಕರು ಮುಗಿ ಬೀಳುತ್ತಿದ್ದಾರೆ, ಇಲ್ಲಿಯವರೆಗೂ ಕೇವಲ 250 ಅಸುಪಾಸಿನಲ್ಲಿದ್ದ ಖರೀದಿದಾರರು ಸಂಖ್ಯೆ ಇಂದು 383ಕ್ಕೆ ಏರಿಕೆ ಕಂಡಿದೆ, ಒಟ್ಟು 296 ಕಮೀಶನ್ ಎಜೆಂಟ್‌ರ ಅಂಗಡಿಗಳಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಲಭ್ಯವಿದ್ದು ಒಟ್ಟು 383 ವರ್ತಕರು ಟೆಂಡರ್‌ನಲ್ಲಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗಿ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಗುರುವಾರ ಮಾರುಕಟ್ಟೆ ದರ: ಸೋಮವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹3009, ಗರಿಷ್ಠ ₹50189, ₹ ಸರಾಸರಿ ₹37529, ಡಬ್ಬಿತಳಿ ಕನಿಷ್ಠ ₹3209, ಗರಿಷ್ಠ ₹61999 ಸರಾಸರಿ ₹40089, ಗುಂಟೂರು ಕನಿಷ್ಠ ₹1689, ಗರಿಷ್ಟ ₹18129, ಸರಾಸರಿ ₹14689ಗೆ ಮಾರಾಟವಾಯಿತು.