ಸಾರಾಂಶ
ಶಿವಾನಂದ ಮಲ್ಲನಗೌಡ್ರ
ಬ್ಯಾಡಗಿ: ಪಟ್ಟಣದ ಚಾವಡಿ ರಸ್ತೆಯಲ್ಲಿನ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ಮಾ. 1ರಿಂದ ಮಾ. 7ರ ವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಜಾತ್ರೆಯನ್ನು ಶಾಂತಿ, ಸೌಹಾರ್ದತೆ ಹಾಗೂ ವಿಜೃಂಭಣೆಯಿಂದ ನಡೆಸುವ ಹಿನ್ನೆಲೆ ಪಟ್ಟಣದಲ್ಲಿ ಸಿದ್ಧತೆ ಸಂಪನ್ನಗೊಂಡಿದ್ದು, 7 ದಿನಗಳ ಕಾಲ ಪಟ್ಟಣದಲ್ಲಿ ಭಕ್ತರು ಗ್ರಾಮದೇವತೆ (ದ್ಯಾಮವ್ವ ದೇವಿ) ಭಕ್ತಿಯಲ್ಲಿ ಮಿಂದೆಳಲಿದ್ದಾರೆ.5 ವರ್ಷಕ್ಕೊಮ್ಮೆ ಬರುವ ಬ್ಯಾಡಗಿ ಪಟ್ಟಣದ ಆರಾಧ್ಯ ದೇವತೆ ಹಾಗೂ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ಪಟ್ಟಣಕ್ಕೆ ಹೊಸತೊಂದು ಉತ್ಸಾಹ ಹಾಗೂ ಮೆರುಗು ತರುತ್ತಿದೆ. ಈ ಬಾರಿ ಜನರಲ್ಲಿ ಉತ್ಸಾಹ ಇಮ್ಮಡಿಗೊಂಡಿದ್ದು, ಎಲ್ಲರ ಮನೆಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಸಿಂಗಾರಗೊಂಡ ದೇವಸ್ಥಾನ: ಜಾತ್ರೆ ನಿಮಿತ್ತ ಪಟ್ಟಣದ ಚಾವಡಿ ರಸ್ತೆಯಲ್ಲಿರುವ ದುರ್ಗಾದೇವಿ ದೇವಸ್ಥಾನ ಸಕಲ ಸಿಂಗಾರದೊಂದಿಗೆ ಕಂಗೊಳಿಸುತ್ತಿದೆ. ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿಯಲಾಗಿದ್ದು, ಹೂವು, ತಳಿರು ತೋರಣ ಹಾಗೂ ವಿದ್ಯುತ್ ಅಲಂಕಾರ ಎಲ್ಲರನ್ನು ಸೆಳೆಯುತ್ತಿದೆ.ಹೆಸರಾಂತ ಶರಣರ ಗಣ್ಯರ ಸಮ್ಮಿಲನ: ಮಾ. 1ರಂದು ಧ್ವಜಾರೋಹಣ, ಮಾ. 2ರಂದು ಶ್ರೀದೇವಿ ಘಟಸ್ಥಾಪನೆ, ಮಾ. 3ರಂದು ಅಂಕಿ ಹಾಕುವುದು ಹಾಗೂ ಉಡಿ ತುಂಬುವುದು, ಮಾ. 4ದೇವಿಯ ಮೆರವಣಿಗೆ, ಮಾ. 5ರಂದು ರಾಣಗೇರ ಕಾರ್ಯಕ್ರಮ, ಮಾ.6 ಗಡಿ ವಿಮೋಚನೆ, ಮಾ. 7ರಂದು ದೇವಿಯ ಮಂದಿರ ಪುರಪ್ರವೇಶ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಹೆಸರಾಂತ ಶರಣರು, ಗಣ್ಯರು ಹಾಗೂ ವಿವಿಧ ಜಾನಪದ ಕಲಾವಿದರು ಗಾಯಕರು ವೇದಿಕೆ ಹಂಚಿಕೊಂಡು ಸೇರಿದ ಭಕ್ತರನ್ನು ರಂಜಿಸಲಿದ್ದಾರೆ.ಮಾದರಿ ಉತ್ಸವ: ಜಾತ್ರೆ ಎಂದರೇ ಯಾವುದೇ ಊರಾಗಲಿ ಅಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್ ಹಾವಳಿ ಜಾಸ್ತಿಯೇ ಇರುತ್ತದೆ. ಅದಕ್ಕಾಗಿ ಸಂಘರ್ಷಗಳು ನಡೆದಿವೆ. ಆದರೆ ಜಾತ್ರಾ ಸಮಿತಿ ವೈಯಕ್ತಿಕ ಫೋಟೋಗಳನ್ನು ಹಾಕಿ ಎಲ್ಲಿಯೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲು ಈ ಬಾರಿ ಅವಕಾಶ ನೀಡಿಲ್ಲ. ಇದರಿಂದ ಕೇವಲ ದೇವಿಯ ಬ್ಯಾನರ್‌ಗಳು ಪಟ್ಟಣದಲ್ಲಿ ರಾರಾಜಿಸುತ್ತಿದ್ದು, ಜಾತ್ರಾ ಸಮಿತಿಯ ಮಾದರಿ ಕೆಲಸ ಎಲ್ಲರ ಮೆಚ್ಚಗೆಗೆ ಪಾತ್ರವಾಗಿದೆ.ಝಗಮಗಿಸುತ್ತಿರುವ ಪಟ್ಟಣ: ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಕದರಮಂಡಲಗಿ ರಸ್ತೆ, ಕಾಕೋಳ ರಸ್ತೆ, ರಟ್ಟಿಹಳ್ಳಿ ರಸ್ತೆ, ಸುಭಾಷ ಸರ್ಕಲ್, ನೆಹರು ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ದ್ವಾರಗಳಲ್ಲಿ ಎಲ್ಲಿ ನೋಡಿದರೂ ಝಗಮಗಿಸುವ ದೀಪಾಲಂಕಾರ ಪಟ್ಟಣಕ್ಕೆ ಬರುವ ಜನರನ್ನು ಸೂಜಿಗಲ್ಲಿನಂತೆ ಸೆಳೆದು ಸ್ವಾಗತಿಸುತ್ತಿದೆ.ಎಲ್ಲ ಸಮಾಜದ ಸಹಕಾರ: ಬಹಳ ಹಿಂದಿನಿಂದಲೂ ಜಾತ್ರೆಯನ್ನು 5 ವರ್ಷಗಳಿಗೊಮ್ಮೆ ನಡೆಸಲಾಗುತ್ತಾ ಬಂದಿದ್ದು, ಪ್ರತಿಯೊಂದು ಜನಾಂಗದ ಜನರು ಸಹ ಜಾತಿ ಭೇದವಿಲ್ಲದೇ ಸಹಕಾರ ನೀಡುತ್ತಾ ಬಂದಿದ್ದಾರೆ. ಈ ವರ್ಷವೂ ಪಟ್ಟಣದಲ್ಲಿ ಸಕಲ ಸಮಾಜದ ಬಂಧುಗಳ ಸಹಕಾರೊದೊಂದಿಗೆ ಬಹಳ ಅದ್ಧೂರಿಯಾಗಿ ನಡೆಸಲಾಗುತ್ತಿದೆ.ಡಿಜೆಗೆ ಬ್ರೇಕ್: ಜಾತ್ರಾ ಮಹೋತ್ಸವ ಎಂದರೆ ಯುವಕರಿಗೆ ಡಬಲ್ ಉತ್ಸಾಹ, ಡಿಜೆ ಹಾಕಿ ಹೆಜ್ಜೆ ಹಾಕಿ ಸಂಭ್ರಮಿಸುವ ಇಚ್ಛೆ. ಆದರೆ ಈ ವರ್ಷ ಜಾತ್ರಾ ಸಮಿತಿ ಯಾವುದೇ ಡಿಜೆಗೆ ಅವಕಾಶ ನೀಡಿಲ್ಲ. ಇದರಿಂದ ಯುವ ಪಡೆಗೆ ಕೊಂಚ ಬೇಸರವಾಗಿದ್ದರೂ ತಮ್ಮ ತಮ್ಮ ಮನೆಗಳಲ್ಲಿ ದೂರದೂರುಗಳಿಂದ ಸ್ನೇಹಿತರು ಸಂಬಂಧಿಗಳನ್ನು ಕರೆಸಿ ವೆಜ್ ನಾನ್‌ವೆಜ್ ಊಟ ಮಾಡುತ್ತ ಕುಣಿದು ಕುಪ್ಪಳಿಸಲು ಸಜ್ಜಾಗಿದ್ದಾರೆ. ಒಟ್ಟಾರೆಯಾಗಿ ಜಾತ್ರಾ ಮಹೋತ್ಸವ ಎಲ್ಲರನ್ನು ಒಂದು ಕಡೆ ಸೇರಿಸಿ ದಣಿದ ದೇಹಗಳಿಗೆ ನೆಮ್ಮದಿ ಹಾಗೂ ಮುದ ನೀಡಲು ಸಜ್ಜಾಗಿದೆ.