ಬೈಂದೂರು ತಾಲೂಕು ಕಚೇರಿ ಪ್ರಜಾ ಸೌಧದ ಕೋರ್ಟ್ ಹಾಲ್ ನಲ್ಲಿ ಬೈಂದೂರು ಹೋಬಳಿಗೆ ಸಂಬಂಧಿಸಿದಂತೆ 94 ಸಿ ಹಾಗೂ 94 ಸಿಸಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿತರಿಸಿದರು.
ಕುಂದಾಪುರ: ಬೈಂದೂರು ತಾಲೂಕು ಕಚೇರಿ ಪ್ರಜಾ ಸೌಧದ ಕೋರ್ಟ್ ಹಾಲ್ ನಲ್ಲಿ ಬೈಂದೂರು ಹೋಬಳಿಗೆ ಸಂಬಂಧಿಸಿದಂತೆ 94 ಸಿ ಹಾಗೂ 94 ಸಿಸಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು ಕ್ಷೇತ್ರದಲ್ಲಿ ಭೂಮಿ ವಂಚಿತರಿಗೆ ಹಕ್ಕುಪತ್ರಗಳನ್ನು ವಿತರಿಸಲು ಕೆಲವು ಕಾನೂನು ತೊಡಕುಗಳಿದ್ದವು, ಅವುಗಳನ್ನು ನಿವಾರಿಸಿಕೊಂಡು ಅರ್ಹರಿಗೆ ಭೂಮಿ ಹಕ್ಕು ನೀಡುತ್ತಿದ್ದು, ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಕಳೆದ ವಾರ ವಂಡ್ಸೆ ಹೋಬಳಿಯಲ್ಲಿ 50 ಕ್ಕೂ ಮಿಕ್ಕಿದ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಗಿದೆ. ಪ್ರಸ್ತುತ ಕ್ಷೇತ್ರದ ಅರ್ಹ 24 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಿದ್ದೇನೆ. ಬಡ ಜನರಿಗೆ ಹಕ್ಕು ಪತ್ರ ಒದಗಿಸುವುದೇ ಪ್ರಮುಖ ಆದ್ಯತೆಯನ್ನಾಗಿ ಇಟ್ಟುಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಬೈಂದೂರು, ತಗ್ಗರ್ಸೆ ಹಾಗೂ ಯಡ್ತರೆ ಗ್ರಾಮಗಳ 9 ಫಲಾನುಭವಿಗಳಿಗೆ 94 ಸಿಸಿ ಹಾಗೂ ಗೋಳಿಹೊಳೆ, ಜಡ್ಕಲ್, ಮುದೂರು, ಯಳಜಿತ್, ನಾಡ, ನಾವುಂದ, ಕಾಲ್ತೊಡು ಹಾಗೂ ಬಿಜೂರು ಗ್ರಾಮಗಳ 15 ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಯಿತು.
ಈ ಸಭೆಯಲ್ಲಿ ತಹಸೀಲ್ದಾರ್ ರಾಮಚಂದ್ರಪ್ಪ, ಕಂದಾಯ ನಿರೀಕ್ಷಕರಾದ ಉಪೇಂದ್ರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.