ಬೈಂದೂರು: 246 ಬೂತುಗಳಲ್ಲಿ ಸಮೃದ್ಧ ನಡಿಗೆ ಸಂಕಲ್ಪ

| Published : Apr 12 2024, 01:00 AM IST

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಮ್ಮಿಕೊಂಡ ಬೂತ್ ಕಡೆಗೆ ಸಮೃದ್ಧ ನಡಿಗೆ ಎನ್ನುವ ಅಭಿಯಾನ 7ನೇ ದಿನ ಗುರುವಾರ ಬೈಂದೂರು ಕ್ಷೇತ್ರದ 100 ಬೂತ್ ಸಂಪರ್ಕ ಪೂರ್ಣಗೊಂಡಿದೆ.

ಕನ್ನಡಪ್ರಭ ವಾರ್ತೆ ಬೈಂದೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಮ್ಮಿಕೊಂಡ ಬೂತ್ ಕಡೆಗೆ ಸಮೃದ್ಧ ನಡಿಗೆ ಎನ್ನುವ ಅಭಿಯಾನ 7ನೇ ದಿನ ಗುರುವಾರ ಬೈಂದೂರು ಕ್ಷೇತ್ರದ 100 ಬೂತ್ ಸಂಪರ್ಕ ಪೂರ್ಣಗೊಂಡಿದೆ.

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೆ ಏರಿಸುವ ಸಂಕಲ್ಪ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷ ಮತಗಳ ಲೀಡ್‌ ಒದಗಿಸುವ ಸಂಕಲ್ಪದೊಂದಿಗೆ ಬೂತ್‌ ಕಡೆಗೆ ಸಮೃದ್ಧ ನಡಿಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ನೇತೃತ್ವ ವಹಿಸಿರುವ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ತಿಳಿಸಿದ್ದಾರೆ.

ನಿರಂತರ 18 ದಿನಗಳ ಕಾಲ ಕ್ಷೇತ್ರದ 246 ಬೂತ್‌ಗಳಲ್ಲಿ ನಡೆಯಲಿರುವ ಈ ಅಭಿಯಾನವು ಗುರುವಾರ 7ನೇ ದಿನ ಪದಾರ್ಪಣೆ ಮಾಡಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಶಾಸಕ ಗಂಟಿಹೊಳೆ ಅವರು ಪ್ರತಿ ಬೂತ್ ಗೆ ಸ್ವತಃ ಭೇಟಿ ನೀಡಿ, ಮೋದಿ ಸರ್ಕಾರದ ಸಾಧನೆಗಳನ್ನು ಮತ್ತು ರಾಘವೇಂದ್ರ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಲುಪಿಸುವ ಮೂಲಕ ಮತಯಾಚಿಸುತ್ತಿದ್ದಾರೆ.

ಅಲ್ಲದೇ ಪ್ರತಿ ಬೂತ್ ಗಳಲ್ಲಿ ಮೋದಿಯನ್ನು ಗೆಲ್ಲಿಸುವ ಪ್ರತಿಜ್ಞಾವಿಧಿಯನ್ನು ನೀಡಲಾಗುತ್ತಿದ್ದು, ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

* ಕೊಲ್ಲೂರಿಗೆ ಮೋದಿ ಸಂಕಲ್ಪ

ಈ ಅಭಿಯಾನದ ಮೂಲಕ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಬೈಂದೂರು ಕ್ಷೇತ್ರದಲ್ಲಿ 1 ಲಕ್ಷ ಮತಗಳ ಮುನ್ನಡೆಯನ್ನು ನೀಡುವ ಮೂಲಕ, ಮೂರನೇ ಬಾರಿ ಪ್ರಧಾನಿಯಾಗಲಿರುವ ನರೇಂದ್ರ ಮೋದಿ ಅವರನ್ನು ಕೊಲ್ಲೂರು ಶ್ರೀ ಮುಕಾಂಬಿಕಾ ದೇವಾಲಯಕ್ಕೆ ಬರ ಮಾಡಿಕೊಳ್ಳುವುದು ಕಾರ್ಯಕರ್ತರ ಸಂಕಲ್ಪವಾಗಿದೆ ಎಂದು ಶಾಸಕ ಗಂಟಿಹೊಳ‍ೆ ತಿಳಿಸಿದ್ದಾರೆ.