ಆಮೆಗತಿಯಲ್ಲಿ ಬೈಪಾಸ್‌ ರಸ್ತೆ ಕಾಮಗಾರಿ!

| Published : May 24 2025, 12:29 AM IST

ಸಾರಾಂಶ

ಇತ್ತೀಚೆಗೆ ಸುರಿದ ಪೂರ್ವ ಮುಂಗಾರು ಮಳೆಗೆ ತಗ್ಗು ರಸ್ತೆಯಲ್ಲಿ ನೀರು ನಿಂತು ಅವಾಂತರಗಳು ಸೃಷ್ಟಿಯಾಗುತ್ತಿವೆ. ಕಳೆದ ವಾರದ ಮಳೆಗೆ ಗಬ್ಬೂರ ಬೈಪಾಸ್‌ ರಸ್ತೆಯಲ್ಲಿ ಟಿಟಿ ವಾಹನವೊಂದು ಸಂಪೂರ್ಣ ಮುಳುಗಿದ ಘಟನೆ ನೆನಪಿದೆ

ಬಸವರಾಜ ಹಿರೇಮಠ ಧಾರವಾಡ

ಸಾವಿನ ಹೆದ್ದಾರಿ ಎಂದೇ ಖ್ಯಾತಿ ಪಡೆದಿರುವ ಇಲ್ಲಿಯ ಹುಬ್ಬಳ್ಳಿ- ಧಾರವಾಡ ಬೈಪಾಸ್‌ ರಸ್ತೆಯ ಮೇಲ್ದರ್ಜೆಗೇರಿಸುವ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದ್ದು, ಇದೀಗ ಮಳೆಗಾಲ ಶುರುವಾಗಿದ್ದರಿಂದ ಕಾಮಗಾರಿ ಮತ್ತಷ್ಟು ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ಮಹತ್ವಾಕಾಂಕ್ಷೆಯ ಈ ಯೋಜನೆಗೆ ನೀಡಿದ್ದ 2025ರ ಸಪ್ಟೆಂಬರ್‌ ತಿಂಗಳ ಗಡುವು ಮೀರುವುದು ನಿಶ್ಚಿತ!

ಇತ್ತೀಚೆಗೆ ಸುರಿದ ಪೂರ್ವ ಮುಂಗಾರು ಮಳೆಗೆ ತಗ್ಗು ರಸ್ತೆಯಲ್ಲಿ ನೀರು ನಿಂತು ಅವಾಂತರಗಳು ಸೃಷ್ಟಿಯಾಗುತ್ತಿವೆ. ಕಳೆದ ವಾರದ ಮಳೆಗೆ ಗಬ್ಬೂರ ಬೈಪಾಸ್‌ ರಸ್ತೆಯಲ್ಲಿ ಟಿಟಿ ವಾಹನವೊಂದು ಸಂಪೂರ್ಣ ಮುಳುಗಿದ ಘಟನೆ ನೆನಪಿದೆ. ಕಿರಿದಾದ ರಸ್ತೆಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಬದಲಿಯಾದ ಸಂಚಾರದ ರಸ್ತೆಯಲ್ಲಿ ತಗ್ಗು- ಗುಂಡಿಗಳಿಂದ ವಾಹನಗಳು ಸಿಲುಕಿ ಪರದಾಡಿದ ಘಟನೆಗಳೂ ನಡೆದಿವೆ.

ಸಾವಿರ ಕೋಟಿ ಯೋಜನೆ:

ಪುಣೆ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-48ರ ದ್ವಿಪಥದಲ್ಲಿ ಸಾವಿರಾರು ಅಪಘಾತಗಳಾದ ಹಿನ್ನೆಲೆಯಲ್ಲಿ ನಾಲ್ಕು ಪಥ ಸೇವಾ ರಸ್ತೆ, ಆರು ಪಥದ ಹೆದ್ದಾರಿ ಸೇರಿ ಒಟ್ಟು ಹತ್ತು ಪಥಗಳ ರಸ್ತೆಯನ್ನಾಗಿ ಮಾಡಲು 2023ರಿಂದ ಕಾಮಗಾರಿ ಶುರುವಾಗಿದೆ. ಭೂಸ್ವಾಧೀನ ವೆಚ್ಚ ಸೇರಿದಂತೆ ₹1,050 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, 2025ರಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಗಡುವು ನೀಡಲಾಗಿತ್ತು.

ಮೂಲಗಳ ಪ್ರಕಾರ 31 ಕಿಮೀ ವ್ಯಾಪ್ತಿಯಲ್ಲಿ, ಭಾರೀ ವಾಹನಗಳಿಗೆ 13 ಅಂಡರ್‌ಪಾಸ್‌ಗಳು, ಲಘು ಮೋಟಾರು ವಾಹನಗಳಿಗೆ 7 ಅಂಡರ್‌ಪಾಸ್‌ಗಳು, ಒಂದು ಓವರ್‌ ಬ್ರಿಡ್ಜ್, ಒಂದು ಸಣ್ಣ ಸೇತುವೆ ಮತ್ತು ಒಂದು ರೈಲ್ವೆ ಓವರ್‌ಬ್ರಿಡ್ಜ್ ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿದೆ. ಸೇತುವೆಯ ಅಪ್ರೋಚ್ ಕೆಲಸವನ್ನು ಸಹ ಪ್ರಾರಂಭಿಸಲಾಗಿದೆ. ಈ ಕೆಲಸ ಮುಗಿದ ನಂತರ, ಹೆದ್ದಾರಿಯಲ್ಲಿ ಈಗಾಗಲೇ ಸ್ಥಾಪಿಸಿರುವ ಹಲವಾರು ತಿರುವುಗಳನ್ನು ತೆಗೆದುಹಾಕಲಾಗುತ್ತದೆ.

ಯೋಜನೆಯನ್ನು ವೇಗಗೊಳಿಸಲು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಇತರರು ಸಭೆಗಳನ್ನು ನಡೆಸಿ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಸಹ ಪರಿಶೀಲಿಸಿದ್ದಾರೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ಸಹ ನೀಡಲಾಗಿದೆ.

ಮಳೆಗಾಲದಲ್ಲಿ ಕೆಲಸ ಹೇಗೆ?: ಈ ಕಾಮಗಾರಿ ಮಾಡುತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಯೊಬ್ಬರು ಹೇಳುವಂತೆ ಎರಡು ಹಂತಗಳಲ್ಲಿ 25 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದು 6 ಪಥದ ಹೆದ್ದಾರಿ ಕೆಲಸಕ್ಕೆ ಸಾಕಾಗುತ್ತದೆ. ಸದ್ಯ ಶೇ. 66 ರಷ್ಟು ಕಾಮಗಾರಿ ಪ್ರಗತಿ ಸಾಧನೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಮುಖ್ಯ ರಸ್ತೆ ಕೆಲಸ ಪೂರ್ಣಗೊಳ್ಳಲಿದೆ ಮತ್ತು ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸುವುದು ನಮ್ಮ ಗುರಿ. ಆದರೆ, ಮಳೆಗಾಲದಲ್ಲಿ ರಸ್ತೆ ನಿರ್ಮಾಣ ಕಾರ್ಯ ಭಾಗಶಃ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಸೆಪ್ಟೆಂಬರ್ ಗಡುವಿನ ಬದಲು ಡಿಸೆಂಬರ್ ವೇಳೆಗೆ ಕೆಲಸ ಒಂದು ಹಂತಕ್ಕೆ ಬರಬಹುದು. ಹಳಿಯಾಳ ಮತ್ತು ನರೇಂದ್ರ ನಡುವಿನ ರೈಲು ಮಾರ್ಗಕ್ಕಾಗಿ ರಸ್ತೆ ಓವರ್ ಬ್ರಿಡ್ಜ್‌ಗೆ ರೈಲ್ವೆ ಅಧಿಕಾರಿಗಳಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಗಿದೆ ಮತ್ತು ಇದಕ್ಕೆ ಹೆಚ್ಚಿನ ಸಮಯ ಬೇಕಾಗಬಹುದು ಮತ್ತು ಮುಂದಿನ ವರ್ಷ ಮಾರ್ಚ್ ವೇಳೆಗೆ ಕೆಲಸವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದರು.

ಆದ್ಯತೆ ಮೇಲೆ ಕಾಮಗಾರಿ: ಮುಖ್ಯ ರಸ್ತೆಗೆ ಅಗತ್ಯವಿರುವ 25 ಹೆಕ್ಟೇರ್ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಕೆಲಸವು ಪೂರ್ಣಗೊಳ್ಳುತ್ತಿದೆ. ಸೇವಾ ರಸ್ತೆ, ಜಂಕ್ಷನ್ ಅಭಿವೃದ್ಧಿ, ಬಸ್ ಬೇ ಮತ್ತು ಇತರ ಕೆಲಸಗಳಿಗಾಗಿ ಅವರಿಗೆ ಹೆಚ್ಚುವರಿಯಾಗಿ 5 ಹೆಕ್ಟೇರ್ ಭೂಮಿಯ ಅಗತ್ಯವಿದೆ. 5 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ, ಆದ್ಯತೆಯ ಆಧಾರದ ಮೇಲೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹು-ಧಾ ಬೈಪಾಸ್ ಯೋಜನಾ ನಿರ್ದೇಶಕ ಭುವನೇಶ್ವರ ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕೆಲವು ಭೂಮಿಗಳಿಗೆ ದಾಖಲೆಗಳಿಲ್ಲ ಆದರೆ, ಅವುಗಳನ್ನು ಸ್ಲಮ್ ಬೋರ್ಡ್ ಭೂಮಿ ಎಂದು ಗುರುತಿಸಲಾಗಿದೆ. ರಾಜ್ಯ ಸರ್ಕಾರಿ ಅಧಿಕಾರಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಸ್ತಾಂತರಿಸಿ ಬೈಪಾಸ್ ಅಗಲೀಕರಣ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಂಡರೆ ಮಾತ್ರ ಅಂದುಕೊಂಡ ಗುರಿ ಸಾಧಿಸಬಹುದು.