ಸಾರಾಂಶ
ಮೊಬೈಲ್ ಟವರ್‌ಗಳ ನಿರ್ಮಾಣದ ವೇಗವು ಕುಂಠಿತವಾಗಿರುವ ಬಗ್ಗೆ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪಿಸಿದರು.
ಶಿವಮೊಗ್ಗ: ಕೇಂದ್ರ ಸರ್ಕಾರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೂರ ಸಂಪರ್ಕ ಸೇವೆಯನ್ನು ಉತ್ತಮ ಪಡಿಸುವ ಸಲುವಾಗಿ ಮೊಬೈಲ್ ಟವರ್‌ಗಳ ಸ್ಥಾಪನೆಗೆ ಕಳೆದ ಮೂರು ವರ್ಷಗಳಲ್ಲಿ 4ಜಿ ಸ್ಯಾಚುರೇಷನ್ ಯುಎಸ್‌ಓಎಫ್ ಅಡಿಯಲ್ಲಿ ಯೋಜನೆ ಮಂಜೂರು ಮಾಡಲಾಗಿದ್ದು, ಮೊಬೈಲ್ ಟವರ್‌ಗಳ ನಿರ್ಮಾಣದ ವೇಗವು ಕುಂಠಿತವಾಗಿರುವ ಬಗ್ಗೆ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಕೇಂದ್ರ ಮತ್ತು ದೂರ ಸಂಪರ್ಕ ಇಲಾಖೆ ಸಚಿವರು, ಶಿವಮೊಗ್ಗ ಜಿಲ್ಲೆಯಲ್ಲಿ 4ಜಿ ಸ್ಯಾಚುರೇಷನ್ ಯೋಜನೆಯಡಿ ಒಟ್ಟು 134 ಮೊಬೈಲ್ ಟವರ್ ಅನುಮೋದಿಸಲಾಗಿದೆ. ಇದರಲ್ಲಿ 49 ಟವರ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ 11 ಟವರ್‌ಗಳು ಕಾರ್ಯನಿರ್ವಹಣೆಯಲ್ಲಿ ಇವೆ.ಇದರ ಜೊತೆಗೆ 227 ಸ್ಥಳಗಳನ್ನು 4ಜಿಗೆ ಅಪ್‌ಗ್ರೇಡ್ ಮಾಡಲು ಯೋಜನೆ ಇದ್ದು, 119 ಸ್ಥಳಗಳಲ್ಲಿ ಸ್ಥಾಪನೆ ಪೂರ್ಣಗೊಂಡಿದೆ. ಮತ್ತು 87 ಸ್ಥಳಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಕಾಮಗಾರಿ ಪ್ರಗತಿಗೆ ಪ್ರಮುಖವಾಗಿ ರಾಜ್ಯ ಸರ್ಕಾರದಿಂದ ಭೂಮಿಯನ್ನು ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವಿಳಂಬವೇ ಮುಖ್ಯ ಅಡಚಣೆಯಾಗಿದೆ ಎಂದು ತಿಳಿಸಿದ್ದಾರೆ.
ಉಳಿದ ಬಿ.ಎಸ್.ಎನ್.ಎಲ್. ಮೊಬೈಲ್ ಟವರ್‌ಗಳ ಸ್ಥಾಪನೆ ಮತ್ತು ಯೋಜನೆಯ ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ರಾಜ್ಯ ಪ್ರಾಧಿಕಾರಗಳೊಂದಿಗೆ ಬಿಎಸ್‌ಎನ್‌ಎಲ್ ಸಕ್ರಿಯವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯತೆಯಿಂದ ಬಾಕಿ ಉಳಿದ ಮೊಬೈಲ್ ಟವರ್‌ಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಒದಗಿಸುವ ವಿಶ್ವಾಸವಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.