ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಬಿಡದಿ ಟೌನ್ ಶಿಪ್‌ ಯೋಜನೆಗಾಗಿ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜೂ.22 ರ ಸೋಮವಾರ ಬೆಳಗ್ಗೆ 11ಕ್ಕೆ ಬಿಡದಿ ಬಿ.ಜಿ.ಎಸ್. ವೃತ್ತದಿಂದ ಬೈರಮಂಗಲದವರೆಗೂ ಬೃಹತ್ ರ್‍ಯಾಲಿಯನ್ನು ಹಮ್ಮಿಕೊಂಡಿದೆ ಎಂದು ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಟಿ. ಲಕ್ಷ್ಮೀನಾರಾಯಣ ರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ಆರ್ಥಿಕ ನೀತಿ, ಉದಾರೀಕರಣ ನೀತಿ, ಮುಕ್ತ ಮಾರುಕಟ್ಟೆ ನೀತಿಗಳು ಜಾರಿಗೆ ಬಂದ ನಂತರ ನಗರ ಕೇಂದ್ರಿತ ಬೆಳವಣಿಗೆಗೆ ನಗರಗಳ ಸುತ್ತ-ಮುತ್ತ ಇರುವ ಫಲವತ್ತಾದ ಕೃಷಿ ಭೂಮಿಯನ್ನು ಲಂಗು ಲಗಾಮಿಲ್ಲದೆ ಕಬಳಿಸಲಾಗುತ್ತಿದೆ. 2013ರ ಭೂಸ್ವಾಧೀನ ಕಾಯ್ದೆಯ ಎಲ್ಲಾ ಹಂತದಲ್ಲೂ ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.

ಬಿಡದಿ ಟೌನ್ ಶಿಪ್ ಅಭಿವೃದ್ಧಿಗಾಗಿ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಗ್ರಾಮಗಳ 9640 ಎಕರ ಫಲವತ್ತಾದ ನೀರಾವರಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಂಪುಟದಲ್ಲಿ ಅನುಮೋದನೆ ಪಡೆದು ಈಗಾಗಲೇ ನೋಟಿಫಿಕೇಷನ್ ಹೊರಡಿಸಲಾಗಿದೆ. ಈ ಸ್ವಾಧೀನ ಪಕ್ರಿಯೆ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿ ಈ ಭಾಗದ ರೈತರು 2025ರ ಮಾರ್ಚ್ 12 ರಿಂದ ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ವಿಭಿನ್ನ ರೀತಿಯ ಹೋರಾಟಗಳನ್ನು ನಡೆಸುತ್ತಿದ್ದಾರೆ. ಹಲವಾರು ಜನಪರ ಸಂಘಟನೆಗಳು ಮತ್ತು ಸಂಯುಕ್ತ ಹೋರಾಟ- ಕರ್ನಾಟಕ ಈ ಚಳವಳಿಗೆ ಬೆಂಬಲವಾಗಿ ನಿಂತಿವೆ. ಆದರೂ ಸರ್ಕಾರ ಜನರ ಕೂಗಿಗೆ ಬೆಲೆ ಕೊಡದೆ ವಾಮಮಾರ್ಗದಿಂದ ಭೂಮಿಯನ್ನು ಪಡೆಯಲು ಮುಂದಾಗಿದೆ. ಇದನ್ನು ತಡೆಗಟ್ಟದಿದ್ದಲ್ಲಿ ಈ ಗ್ರಾಮಗಳ ರೈತ ಮತ್ತು ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಈ ಕಾರಣಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಬಿಡದಿ ಹೋಬಳಿಯ ರೈತರ ಭೂಸ್ವಾಧೀನ ವಿರೋಧಿ ಹೋರಾಟವನ್ನು ಬೆಂಬಲಿಸಿ ಜೂ. 22 ರಂದು ಹಮ್ಮಿಕೊಂಡಿರುವ ಬೈರಮಂಗಲ ಚಲೋದಲ್ಲಿ ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ದಕ್ಷಿಣ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಪಕ್ಕದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.


ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ರವಿಶಂಕರ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯದ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಹಿರಿಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಕಾರ್ಯಾಧ್ಯಕ್ಷರಾದ ಜೆ.ಎಂ. ವೀರಸಂಗಯ್ಯ, ವಿ.ಎಂ. ಮಹೇಶ್ ಪ್ರಭು, ಎ. ಗೋವಿಂದರಾಜು ಪ್ರಧಾನ ಕಾರ್ಯದರ್ಶಿಗಳಾದ ಎನ್.ಡಿ. ವಸಂತ ಕುಮಾರ್. ರವಿಕಿರಣ್ ಪುಣಚ, ಉಪಾಧ್ಯಕ್ಷರಾದ ಎ.ಎಲ್. ಕೆಂಪೂಗೌಡ, ಶಿವಾನಂದ ಶುದ್ದೆ, ಮುತ್ತಪ್ಪ ಕೋಮಾರಿ ಕೆ.ಪಿ. ಭೂತಯ್ಯ, ಸುರೇಶ್ ಬಾಬು, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜನಪರ ಸಂಘಟನೆಗಳ ರಾಜ್ಯ ಸಲಹೆಗಾರರು, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳ ಪದಾಧಿಕಾರಿಗಳು ಮತ್ತು ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ಬಿ.ಯಶವಂತ್, ವರಲಕ್ಷ್ಮಿ, ನೂರ್ ಶ್ರೀಧರ್. ಕೆ.ವಿ. ಭಟ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ, ಜಿಲ್ಲಾ ಸಂಚಾಲಕ ಈಶ್ವರರೆಡ್ಡಿ, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಎನ್.ಸಿ. ಯರ್ರಪ್ಪ, ಕೆ.ಪಿ. ಈಶ್ವರರೆಡ್ಡಿ, ನಾರಾಯಣಸ್ವಾಮಿ, ಪೆದ್ದಪ್ಪಯ್ಯ ಮತ್ತಿತರರು ಇದ್ದರು.

ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ಟಿ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿದರು. ರಾಮಾಂಜಿನಪ್ಪ, ಈಶ್ವರರೆಡ್ಡಿ ಮತ್ತಿತರರು ಇದ್ದರು.