ಕನ್ನಡಪ್ರಭ ವಾರ್ತೆ ಮಂಡ್ಯ

ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಕ್ಷಣ ಕೈಬಿಡುವಂತೆ, ಫಲವತ್ತಾದ ಕೃಷಿ ಭೂಮಿಯನ್ನು ರಕ್ಷಿಸುವುದರೊಂದಿಗೆ ರೈತರನ್ನು ಬೀದಿಪಾಲು ಮಾಡದಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮತ್ತು ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ ನೇತೃತ್ವದಲ್ಲಿ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ರಾಜ್ಯ ಸರ್ಕಾರವು ಬಿಡದಿ ಭಾಗದ ರೈತರನ್ನು ಒಕ್ಕಲೆಬ್ಬಿಸಿ, ಕೃಷಿಗೆ ಯೋಗ್ಯವಾದ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದೆ. ಈ ಯೋಜನೆಯ ಹಿಂದೆ ದೊಡ್ಡ ರಿಯಲ್ ಎಸ್ಟೇಟ್ ದಂಧೆ ಅಡಗಿದೆ. ನೂತನ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯೋಜನೆಯನ್ನು ಸರ್ಕಾರದ ಪ್ರತಿಷ್ಠೆಯಾಗಿ ನೋಡುವ ಬದಲು ತಮ್ಮ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು, ಯೋಜನೆಯನ್ನು ಜಾರಿಗೊಳಿಸಿಯೇ ತೀರುತ್ತೇನೆ ಎಂದು ದುರ್ವರ್ತನೆ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.

ರೈತರ ಹಿತರಕ್ಷಣೆಗಾಗಿ ಜೆಡಿಎಸ್ ಹೋರಾಟ ನಿರಂತರವಾಗಿರುತ್ತದೆ. ಹೋರಾಟ ಮಾಡದಿದ್ದರೆ ಈ ಸರ್ಕಾರ ಕೇಳುವುದಿಲ್ಲ. ಟೌನ್‌ಶಿಪ್ ಹೆಸರಿನಲ್ಲಿ ಸರ್ಕಾರ ರಿಯಲ್ ಎಸ್ಟೇಟ್ ದಂಧೆಕೋರರ ಹಿತಾಸಕ್ತಿ ಕಾಯಲು ಹೊರಟಿದೆ. ಇದರಿಂದ ಬಿಡದಿ ಭಾಗದ ಹೈನುಗಾರಿಕೆ, ರೇಷ್ಮೆ ಉದ್ಯಮ, ತೋಟಗಾರಿಕೆ ಸಂಪೂರ್ಣ ನಾಶವಾಗಿ ಸುಮಾರು ೧೦ ಲಕ್ಷಕ್ಕೂ ಅಧಿಕ ಮರಗಳು ಧರಶಾಹಿಯಾಗಲಿವೆ. ಹಿಂದೆ ಹಸಿರು ವಲಯ ಉಳಿಸಬೇಕು ಎಂದು ಮಾತನಾಡಿದ್ದವರೇ ಇಂದು ಈ ವಿನಾಶಕ್ಕೆ ಬೆಂಬಲ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಹಠಮಾರಿ ಧೋರಣೆಯನ್ನು ಬಿಟ್ಟು ಸಣ್ಣ ರೈತರ ಬದುಕನ್ನು ಉಳಿಸಬೇಕು. ಮಂಡ್ಯ ವಿಧಾನಸಭಾ ಕ್ಷೇತ್ರದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ರೈತರು ಜೂ.೨೧ರಂದು ನಡೆಯಲಿರುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದರು.


ಜೆಡಿಎಸ್ ನಾಯಕ ಹಾಗೂ ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ ಮಾತನಾಡಿ, ದೇಶದ ಬೆನ್ನೆಲುಬಾದ ರೈತರ ಬದುಕು ಹಸನಾಗಬೇಕಾದರೆ ಮೊದಲು ಅವರ ಕೃಷಿ ಭೂಮಿ ಉಳಿಯಬೇಕು. ಬಿಡದಿ ಟೌನ್‌ಶಿಪ್‌ನಿಂದಾಗಿ ರೈತ ಸಮುದಾಯಕ್ಕೆ ಭಾರೀ ಅನ್ಯಾಯವಾಗುತ್ತಿದೆ. ಹೀಗಾಗಿ ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಹಾಗೂ ಕರಾಳ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜೂ.೨೧ರಂದು ಬಿಡದಿಯಿಂದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಈ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಂದ ಸಾವಿರಾರು ರೈತರನ್ನು ಒಟ್ಟುಗೂಡಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸುತ್ತೇವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ರವಿ ಕಂಸಾಗರ , ಜೆಡಿಎಸ್ ಮುಖಂಡರಾದ ಸ್ವಾಮಿ ಬೂದನೂರು, ಜಯರಾಂ ಸಾತನೂರು, ಅಲ್ಪಸಂಖ್ಯಾತ ಘಟಕದ ಮಹಮದ್, ಪುಟ್ಟಸ್ವಾಮಿ, ಮಂಜುಳಾ ಉದಯಶಂಕರ್, ಟಿ.ಕೆ.ರಾಮಲಿಂಗಯ್ಯ, ಸಿದ್ದರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು.