ಸಿಎಂ ಬದಲಾವಣೆ ಬಗ್ಗೆ ಯಾವ ಚರ್ಚೆ ನಡೆದಿಲ್ಲ ಎಂದಿದ್ಯಾಕೆ ಬೈರೇಗೌಡ?

| Published : Oct 09 2024, 01:35 AM IST

ಸಿಎಂ ಬದಲಾವಣೆ ಬಗ್ಗೆ ಯಾವ ಚರ್ಚೆ ನಡೆದಿಲ್ಲ ಎಂದಿದ್ಯಾಕೆ ಬೈರೇಗೌಡ?
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರು, ಹೈಕಮಾಂಡ್‌ ನಾಯಕರು ಸಿಎಂ ಸಿದ್ದರಾಮಯ್ಯ ಪರ ಇದ್ದೇವೆ ಎಂದು ಸ್ಪಷ್ಟಪಡಿಸಿದ ಸಚಿವ ಕೃಷ್ಣ ಬೈರೇಗೌಡ

ಕನ್ನಡಪ್ರಭ ವಾರ್ತೆ ಬೆಳಗಾವಿ

ಪಕ್ಷದ ವೇದಿಕೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇರೆ ಯಾರಾದರೂ ಪ್ರಯತ್ನ ನಡೆಸಿದ್ದರೆ ಅದು ಅ‍ವರ ವೈಯಕ್ತಿಕ ವಿಚಾರ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಕಿತ್ತೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಶಾಸಕರು ಹಾಗೂ ಹೈಕಮಾಂಡ್‌ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಲ ನಾಯಕರು ಭೇಟಿಯಾಗಿದ್ದಾರೆ. ಅವರವರ ಪ್ರಯತ್ನ, ಆಸೆ ಅದು ಅವರಿಗೆ ಬಿಟ್ಟದ್ದು. ಅದು ತಪ್ಪೇನೂ ಅಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ ಅವರು ಪಕ್ಷದ ಉನ್ನತ ಮಟ್ಟದಲ್ಲಿದ್ದಾರೆ. ಇ‍ವರೆಲ್ಲಾ ನಾವು ಸಿಎಂ ಬೆನ್ನಿಗೆ ನಿಂತಿದ್ದೇವೆ ಎಂದು ನಮಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಸಿಎಂ ಬದಲಾವಣೆ ಎನ್ನುವುದು ಕೇವಲ ಊಹಾಪೋಹವಷ್ಟೇ ಎಂದು ಸ್ಪಷ್ಟಪಡಿಸಿದರು.

ಜಮ್ಮುವಿನಲ್ಲಿ ಕಾಂಗ್ರೆಸ್ ನೇತೃತ್ವದ ಘಟಬಂಧನ್‌ಗೆ ಬಹುಮತ ಸಿಕ್ಕಿರುವುದು ಸಂತೋಷದ ವಿಷಯ. ರಾಹುಲ್ ಗಾಂಧಿ ಹಾಗೂ ಖರ್ಗೆಯವರಿಗೆ ಅಭಿನಂದನೆಗಳು. ಅವರ ನೇತೃತ್ವದಲ್ಲಿ ಹೋರಾಟ ನಡೆದು ಬಂದಿದೆ. ದೇಶದಲ್ಲಿ ಕೆಲವೇ ಕೆಲವು ಶ್ರೀಮಂತರಿಗೆ ಅನುಕೂಲ ಆದರೆ ಸಾಲದು. ಜನಸಾಮಾನ್ಯರಿಗೆ ಅನುಕೂಲ ಆಗಬೇಕು. ದೇಶದಲ್ಲಿ ಉದ್ಯೋಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ವಿರುದ್ಧ ರಾಹುಲ್ ಗಾಂಧಿ ಹೋರಾಟ ನಡೆಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ನೀಡಿವೆ. ಅದಕ್ಕಿಂತಲೂ ಹೆಚ್ಚಿನ ಬೆಂಬಲ ಈ ಚುನಾವಣೆಯಲ್ಲಿ ದೊರೆತಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ವಿಶ್ಲೇಷಿಸಿದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬರುತ್ತಿದೆ. ಅಲ್ಲಿಯೂ ನಮಗೆ ಬಹುಮತ ಸಿಗುವ ನಿರೀಕ್ಷೆ ಇದೆ. ಒಟ್ಟಾರೆ ದೇಶದಲ್ಲಿ ಬಡವರ ವಿರೋಧಿ ಸರ್ಕಾರದ ಇದೆ. ಬಡವರು, ಯುವಕರಿಗೆ ಉದ್ಯೋಗ ಕೊಡುತ್ತಿಲ್ಲ. ಕೆಲವೇ ಕೆಲವು ಅಂಬಾನಿ, ಅದಾನಿಯಂತವರಿಗೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.