ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ, ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ, ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ ಹೋರಾಟಗಳಲ್ಲಿ ಪಾಲ್ಗೊಂಡು ತಂದೆಗೆ ತಕ್ಕ ಮಗನಾಗಿರುವ ಕ್ಷೇತ್ರದ ಶಾಸಕ ವಿಜಯೇಂದ್ರ ಸ್ವಕ್ಷೇತ್ರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ತೆರವುಗೊಳಿಸಲು ಸುದೀರ್ಘ ಕಾಲದಿಂದ ನಡೆಯುತ್ತಿರುವ ಹೋರಾಟಕ್ಕೆ ಮಾತ್ರ ಸ್ಪಂದಿಸುವಲ್ಲಿ ಹಿಂದೇಟು ಹಾಕುತ್ತಿರುವುದು ರೈತರು, ಬಸ್,ಲಾರಿ ಮಾಲೀಕರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವರಾಜ್ ಪಾಟೀಲ್ ಬೇಸರಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ, ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ, ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ ಹೋರಾಟಗಳಲ್ಲಿ ಪಾಲ್ಗೊಂಡು ತಂದೆಗೆ ತಕ್ಕ ಮಗನಾಗಿರುವ ಕ್ಷೇತ್ರದ ಶಾಸಕ ವಿಜಯೇಂದ್ರ ಸ್ವಕ್ಷೇತ್ರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ತೆರವುಗೊಳಿಸಲು ಸುದೀರ್ಘ ಕಾಲದಿಂದ ನಡೆಯುತ್ತಿರುವ ಹೋರಾಟಕ್ಕೆ ಮಾತ್ರ ಸ್ಪಂದಿಸುವಲ್ಲಿ ಹಿಂದೇಟು ಹಾಕುತ್ತಿರುವುದು ರೈತರು, ಬಸ್,ಲಾರಿ ಮಾಲೀಕರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವರಾಜ್ ಪಾಟೀಲ್ ಬೇಸರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೊರವಲಯ ಕುಟ್ರಹಳ್ಳಿ ಬಳಿ ನಿರ್ಮಿಸಲಾದ ಅವೈಜ್ಞಾನಿಕ ಟೋಲ್ ಗೇಟ್ ತೆರವುಗೊಳಿಸುವಂತೆ ಕಳೆದ 3-4 ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದು, ಈ ದಿಸೆಯಲ್ಲಿ ಅ.9 ರಂದು ಪಟ್ಟಣವನ್ನು ಸಂಪೂರ್ಣವಾಗಿ ಸ್ವಯಂ ಪ್ರೇರಿತ ಅಭೂತಪೂರ್ವ ಬಂದ್ ಗೊಳಿಸಿ ವ್ಯಾಪಾರಸ್ಥರು, ಖಾಸಗಿ ಬಸ್ ಮಾಲೀಕರು, ವರ್ತಕರು ಬೆಂಬಲ ಸೂಚಿಸಿದ್ದಾರೆ. ಈ ದಿಸೆಯಲ್ಲಿ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಕಡಿಮೆ ಅಂತರದಲ್ಲಿ ನಿರ್ಮಾಣವಾಗಿರುವ ಅವೈಜ್ಞಾನಿಕ ಟೋಲ್ ಗೇಟ್‌ನಿಂದಾಗಿ ರೈತರು, ಖಾಸಗಿ ವಾಹನ ಮಾಲಿಕರ ಸಹಿತ ಪ್ರತಿಯೊಬ್ಬರೂ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಶಾಸಕರು, ಸಂಸದರ ಗಮನ ಸೆಳೆಯಲಾಗಿದ್ದು, ಅಧಿವೇಶನದಲ್ಲಿ ವಿಷಯ ಪ್ರಸ್ಥಾಪಿಸಿ ತೆರವುಗೊಳಿಸಲು ಪ್ರಯತ್ನಿಸುವುದಾಗಿ ನೀಡಿದ ಭರವಸೆ ಹುಸಿಯಾಗಿದೆ. ಕಳೆದ ಅಧಿವೇಶನದಲ್ಲಿ ಸಮರ್ಪಕವಾಗಿ ವಿಷಯ ಮಂಡನೆಯಾಗದೆ ನಿರಾಸೆಯುಂಟಾಗಿದೆ ಎಂದ ಅವರು, ಹೋರಾಟ ಪ್ರವೃತ್ತಿ ರಕ್ತಗತವಾಗಿರುವ ಯಡಿಯೂರಪ್ಪನವರು ಹಿಂದೆ ವಿಧಾನಸಭೆಯಲ್ಲಿ ರೈತ ವಿರೋಧಿ ಶಾಸನ ಮಂಡಿಸಿದಾಗ ಒಂಟಿ ಕಾಲಿನಲ್ಲಿ ನಿಂತು ವಾಪಾಸ್ ಪಡೆಯಲು ಯಶಸ್ವಿಯಾಗಿದ್ದು, ಪ್ರಸ್ತುತ ಯಡಿಯೂರಪ್ಪನವರು ಶಾಸಕರಾಗಿದ್ದಲ್ಲಿ ಸಮಸ್ಯೆಗೆ ಪರಿಹಾರ ಖಚಿತವಾಗಿ ದೊರೆಯುತ್ತಿತ್ತು. ಅವರ ಮಾದರಿಯಲ್ಲಿ ಪುತ್ರ ಶಾಸಕ ವಿಜಯೇಂದ್ರ ಸ್ವಕ್ಷೇತ್ರದ ಜನತೆಗಾಗಿರುವ ತೊಂದರೆ ಬಗ್ಗೆ ಸದನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಸರ್ಕಾರದ ಕಣ್ಣು ತೆರೆಸಬೇಕಾಗಿರುವುದು ಜವಾಬ್ದಾರಿಯಾಗಿದೆ ಎಂದರು. ದೂರದ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ, ದಾವಣಗೆರೆಯಲ್ಲಿ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ವಿದ್ಯಾರ್ಥಿಗಳ ಸಮಸ್ಯೆಗೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಶಾಸಕರು ಸ್ವಕ್ಷೇತ್ರದಲ್ಲಿನ ಅವೈಜ್ಞಾನಿಕ ಟೋಲ್ ಗೇಟ್ ತೆರವು ಬಗ್ಗೆ ಮಾತ್ರ ಹೊಂದಿರುವ ನಿರಾಸಕ್ತಿ ಅನುಮಾನ ಹುಟ್ಟುಹಾಕಿದೆ ಎಂದರು.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೇಟ್ ನಿರ್ಮಾಣವಾಗಿದ್ದು, ಸಮಗ್ರ ಅಭಿವೃದ್ಧಿ ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿರುವ ಬಗ್ಗೆ ಒಪ್ಪಿಕೊಳ್ಳುವ ಶಾಸಕರು ಗೇಟ್ ತೆರವು ಬಗ್ಗೆ ಮಾತ್ರ ಮೌನ ವಹಿಸಿದ್ದಾರೆ ಎಂದು ಬೇಸರಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಸಂಪುಟ ಸಭೆಯಲ್ಲಿ ಪ್ರಸ್ಥಾಪಿಸದೆ ರಾಜಕೀಯ ಇಚ್ಚಾಶಕ್ತಿ ಕೊರತೆ, ಜನಪ್ರತಿನಿಧಿಗಳ ಸ್ಪಷ್ಟ ಉದಾಸೀನತೆ ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಎಂದರು.

ಟೋಲ್ ಗೇಟ್ ತೆರವು ವಿಚಾರದಲ್ಲಿ ಸ್ಥಳೀಯರಿಗೆ ರಿಯಾಯತಿ ಮತ್ತಿತರ ರಾಜಿ ಸಂಧಾನ ಒಪ್ಪಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ರೈತ ಸಂಘದ ಕಾರ್ಯಾದ್ಯಕ್ಷ ಪುಟ್ಟಣಗೌಡ್ರು ದೊಡ್ಡಣಗುಡ್ಡೆ ಮಾತನಾಡಿ,ರೈತ ಸಮಸ್ಯೆಗೆ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ನಾಯಕರು ಟೋಲ್ ಗೇಟ್ ವಿಚಾರದಲ್ಲಿ ಮೌನ ವಹಿಸಿದ್ದು, ಈ ಬಗ್ಗೆ ಶಾಸಕರು ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಮನೆ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಪ್ರ.ಕಾ ತಾಳಗುಂದ ರಾಜಣ್ಣ, ಬಸ್ ಮಾಲೀಕರ ಸಂಘದ ಚಂದ್ರಕಾಂತ್ ರೇವಣಕರ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಬ್ಬೀರ್ ಮತ್ತಿತರರು ಉಪಸ್ಥಿತರಿದ್ದರು.