ಕನ್ನಡಪ್ರಭ ವಾರ್ತೆ ಚಿತ್ರದುರ್ಗ:

ಸುದೀರ್ಘ 50 ವರ್ಷಗಳ ರಾಜಕೀಯ ಪ್ರಯಾಣದಲ್ಲಿ ಬಿ.ಎಸ್.ಯಡಿಯೂರಪ್ಪನವರು 45 ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿ ಐದು ವರ್ಷ ಮಾತ್ರ ಅಧಿಕಾರ ಅನುಭವಿಸಿದ್ದಾರೆ. ಅಧಿಕಾರ ಇರಲಿ, ಬಿಡಲಿ, ರೈತರು, ಜನಸಾಮಾನ್ಯರು, ಬಡವರು, ಶೋಷಿತರ ಕಣ್ಣೊರೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ಲಾಘಿಸಿದ್ದಾರೆ.

ಯಡಿಯೂರಪ್ಪ ಅಭಿಮಾನೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ ಅವರು, ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡರು. ಬಳಿಕ, ಸಮಾರಂಭ ನಡೆಯಲಿರುವ ಸ್ಥಳಕ್ಕೆ ತೆರಳಿ, ಸಮಾರಂಭದ ಸಿದ್ಧತೆಗಳ ಪರಿಶೀಲನೆ ನಡೆಸಿದರು. ನಂತರ, ಮಾದಾರ ಚೆನ್ನಯ್ಯ ಪೀಠಕ್ಕೆ ತೆರಳಿ, ಶ್ರೀಗಳನ್ನು ಸಮಾರಂಭಕ್ಕೆ ಆಹ್ವಾನಿಸಿದರು.

ಈ ವೇಳೆ ಮಾತನಾಡಿ, ಯಾರಿಗೆ ಅನ್ಯಾಯವಾಗುತ್ತದೆಯೋ ಅಲ್ಲಿ ಯಡಿಯೂರಪ್ಪ ಇರುತ್ತಿದ್ದರು. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮನೆಗಳನ್ನು ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ನೀಡಿದ 1 ಲಕ್ಷ ರು. ಜೊತೆಗೆ ರಾಜ್ಯದಿಂದ 4 ಲಕ್ಷ ರು.ಸೇರಿಸಿ ಮನೆ ಕಟ್ಟಿಸಿಕೊಳ್ಳಲು ನೆರವಾಗಿದ್ದನ್ನು ಜನ ಇನ್ನು ಮರೆತಿಲ್ಲ ಎಂದು ಹೇಳಿದರು.

ಕೋಟ್ಯಂತರ ಜನರ ಪ್ರೀತಿ ವಿಶ್ವಾಸ ಗಳಿಸಿರುವ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವದಲ್ಲಿ ಜಿಲ್ಲೆಯಿಂದ 10 ಸಾವಿರ ಭಾಗ್ಯಲಕ್ಷ್ಮಿ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಮೇ 8ರಂದು ಸಂಜೆ ಯಡಿಯೂರಪ್ಪನವರನ್ನು ಭವ್ಯವಾಗಿ ಸ್ವಾಗತಿಸಲಾಗುವುದು. 9ರಂದು ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‍ ಶಾ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ವಿವಿಧ ಮಠಾಧೀಶರು, ರಾಜಕಾರಣಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.