ಅಂತಿಮವಾಗಿ ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಚಲನಚಿತ್ರ ಕ್ಷೇತ್ರಗಳಿಗೆ ದಶಕಗಳ ಕಾಲ ಗಣನೀಯ ಕೊಡುಗೆ ನೀಡಿರುವ ಗಡಿನಾಡಿನ ಹಿರಿಯ ಸಾಹಿತಿ ಸಿ.ಜಿ. ಹಂಪಣ್ಣ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಭೆ ಸರ್ವಾನುಮತದ ನಿರ್ಣಯ

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನ.14 ಮತ್ತು 15ರಂದು ನಗರದಲ್ಲಿ ನಡೆಯಲಿರುವ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಸಾಹಿತಿ, ಚಲನಚಿತ್ರ ಕಥೆಗಾರ, ನಿರ್ಮಾಪಕ ಹಾಗೂ ನಿರ್ದೇಶಕ ಚೇಳ್ಳಗುರ್ಕಿ ಸಿ.ಜಿ.ಹಂಪಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಸಿ.ಜಿ. ಹಂಪಣ್ಣ, ಹರಪನಹಳ್ಳಿಯ ಸಾಹಿತಿ ರಾಮನಮಲಿ, ಲೇಖಕ ಪಿ.ಆರ್.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಚೋರನೂರು ಟಿ. ಕೊಟ್ರಪ್ಪ ಹೆಸರುಗಳನ್ನು ಸದಸ್ಯರು ಪ್ರಸ್ತಾಪಿಸಿದರು.

ಅಂತಿಮವಾಗಿ ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಚಲನಚಿತ್ರ ಕ್ಷೇತ್ರಗಳಿಗೆ ದಶಕಗಳ ಕಾಲ ಗಣನೀಯ ಕೊಡುಗೆ ನೀಡಿರುವ ಗಡಿನಾಡಿನ ಹಿರಿಯ ಸಾಹಿತಿ ಸಿ.ಜಿ. ಹಂಪಣ್ಣ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.

ಗಡಿನಾಡಿನ ಸಾಹಿತ್ಯ ಸಾಧಕ:ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ಜಿಲ್ಲೆಯ ಚೇಳ್ಳಗುರ್ಕಿ ಗ್ರಾಮದಲ್ಲಿ 1938ರ ಆ.27ರಂದು ಜನಿಸಿದ ಸಿ.ಜಿ.ಹಂಪಣ್ಣ ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 1958ರಲ್ಲಿ ಮದ್ರಾಸ್ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು, ಕಳೆದ 66 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪತ್ರಕರ್ತರಾಗಿ ಮಾತ್ರವಲ್ಲದೆ ಸಾಹಿತಿ, ಚಲನಚಿತ್ರ ಕಥೆಗಾರ, ನಿರ್ಮಾಪಕ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ಮಲೆನಾಡು ಮಾಸಪತ್ರಿಕೆಯ ಸಹ ಸಂಪಾದಕರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕರಾಗಿ ಹಾಗೂ ಈ ನಮ್ಮ ಕನ್ನಡನಾಡು ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಳ್ಳಾರಿ ಜಿಲ್ಲಾ ಸಮಾಚಾರ, ಚಿತ್ರಸುಧಾ, ವಿಜಯನಗರ ಎಕ್ಸ್‌ಪ್ರೆಸ್ ಹಾಗೂ ಕನ್ನಡ ಸಿಂಧೂರ ಪತ್ರಿಕೆಗಳನ್ನು ಸ್ವತಂತ್ರವಾಗಿ ನಡೆಸುವ ಮೂಲಕ ಸ್ಥಳೀಯ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಂಪಣ್ಣ ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದು, ಹಲವು ತಲೆಮಾರುಗಳ ಪತ್ರಕರ್ತರೊಂದಿಗೆ ನಿಕಟ ಒಡನಾಟ ಹೊಂದಿದ್ದಾರೆ.

19ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳ ರಚನೆ: ಪತ್ರಿಕೋದ್ಯಮದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಹಂಪಣ್ಣ ಗಮನಾರ್ಹ ಸಾಧನೆ ಮಾಡಿದ್ದಾರೆ. ಕನ್ನಡ ನಾಡು ಸೊಬಗಿನ ಬೀಡು, ಪ್ರೇಮಪಾಶ,ದಾರಿದೀಪ, ವಿಧಿವಿಲಾಸ, ನಂದನವನ,ಕಾಣಿಕೆ, ಒಡೆಯಿತು ಒಲವಿನ ಕನ್ನಡಿ,ದೈವ ಸಂಕಲ್ಪಸೇರಿದಂತೆ 19ಕ್ಕೂ ಹೆಚ್ಚು ಸಾಹಿತ್ಯ ಕೃತಿ ರಚಿಸಿದ್ದಾರೆ.

ತಮ್ಮ ಬದುಕಿನ ಅನುಭವಗಳು, ಪತ್ರಿಕೋದ್ಯಮದ ನೆನಪುಗಳು ಹಾಗೂ ಸಾಮಾಜಿಕ ಒಡನಾಟವನ್ನು ದಾಖಲಿಸುವ ಉದ್ದೇಶದಿಂದ ನೆನಪಿನಂಗಳ ಮತ್ತು ಸವಿ ನೆನಪು ಎಂಬ ಎರಡು ಆತ್ಮಕಥನ ಕೃತಿ ರಚಿಸಿದ್ದಾರೆ. ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಸಾಧನೆ ಗುರುತಿಸಿ ಉಡುಗೊರೆ,ಶ್ರಮಜೀವಿ,ಸವಿಜೇನು ಹಾಗೂ ಗಡಿನಾಡ ಕನ್ನಡಿಗ ಎಂಬ ಅಭಿನಂದನಾ ಗ್ರಂಥ ಹೊರತರಲಾಗಿದೆ.

ಹಲವು ಪ್ರಶಸ್ತಿಗಳ ಗರಿ: ಹಂಪಣ್ಣ ಬಹುಮುಖ ಸಾಧನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಂಡೂರು ವಿರಕ್ತಮಠದ ಬಸವ ಬೆಳಗು ಪ್ರಶಸ್ತಿ, ಇಳಕಲ್ ಮಠದ ಮಹಾಂತ ಶ್ರೀ ಪ್ರಶಸ್ತಿ, ಬಸವಸಿರಿ ಪ್ರಶಸ್ತಿ, ಕರ್ನಾಟಕ ಪತ್ರಕರ್ತರ ಸಂಘದ ಹೂಗಾರ ಪ್ರಶಸ್ತಿ, ಶ್ರೀಕೃಷ್ಣದೇವರಾಯ ಪ್ರಶಸ್ತಿ, ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯ ಶಂಕರ-ಭಾರ್ಗವ ಪ್ರಶಸ್ತಿ ಹಾಗೂ ಡಾ.ಡಿ.ವಿ. ಗುಂಡಪ್ಪ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸಂದಿವೆ.

ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುವುದರ ಜತೆಗೆ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಹಂಪಣ್ಣ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಲಭಿಸಿರುವುದು ವಿಶೇಷವಾಗಿದೆ.

ನ.14 ಮತ್ತು 15ರಂದು ಬಳ್ಳಾರಿಯಲ್ಲಿ ಎರಡು ದಿನಗಳ ಕಾಲ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.