ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕಾಂಗ್ರೆಸ್ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಸಿ.ಪಿ. ಯೋಗೀಶ್ವರ್ ಅವರು ಕಾಂಗ್ರೆಸ್ಸಿಗೆ ಸೇರಲು ಉತ್ಸುಕರಾಗಿರುವ ಬಗ್ಗೆ ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಮೇಲಿನಂತೆ ಉತ್ತರಿಸುವ ಮೂಲಕ ಅವರು, ಸಿ.ಪಿ. ಯೋಗೇಶ್ವರ್ ಪಕ್ಷಕ್ಕೆ ಬರುವ ಮುನ್ಸೂಚನೆಯನ್ನು ನೀಡಿದರು.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಡಿ.ಕೆ. ಸುರೇಶ್ ಹೆಸರು ಕೂಡ ಇದೆ. ನಮ್ಮ ಪಕ್ಷದ ಅಧ್ಯಕ್ಷರೇ ಅಲ್ಲಿ ಇರುವ ಕಾರಣ ಅವರೇ ಸೂಕ್ತ ಅಭ್ಯರ್ಥಿ ತೀರ್ಮಾನ ಮಾಡುತ್ತಾರೆ. ಒಳ್ಳೆ ಅಭ್ಯರ್ಥಿ ಹಾಕಬೇಕು ಅಂತಾ ಹೇಳಿದ್ದೇನೆ ಎಂದರು.ಸಂಡೂರಿನಿಂದ ಸಂಸದ ಈ. ತುಕಾರಾಮ್ ಅವರ ಪತ್ನಿಗೆ ಟಿಕೆಟ್ ನೀಡುತ್ತೇವೆ ಎಂದು ಘೋಷಿಸಿದ ಸಿದ್ದರಾಮಯ್ಯ ಅವರು, ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ.ಕೆ. ಸುರೇಶ್ ಅವರೂ ಕೂಡ ಪ್ರಬಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವ್ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದು ತಿಳಿಸಿದರು.