ಸಾರಾಂಶ
ಈ ಹಿಂದೆ ಕಸಾಪ ಅಧ್ಯಕ್ಷನಾಗಿದ್ದ ವೇಳೆ ಕನ್ನಡಪರವಾದ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ತಾಲೂಕಿನಲ್ಲಿ ಕಸಾಪದ ಅರಿವು ಮೂಡಿಸಿದ್ದೇನೆ. ಅದೇ ರೀತಿ ಈ ಬಾರಿ ಪ್ರತಿ ಗ್ರಾಮ ಮಟ್ಟದಲ್ಲಿ ಕಸಾಪ ಕುರಿತಾಗಿ ಅರಿವು ಮೂಡಿಸುವ ಜತೆಗೆ ಕನ್ನಡ ಅಭಿಮಾನಿಗಳು ಹಾಗೂ ಸಾಹಿತ್ಯಸಕ್ತರನ್ನು ಗುರುತಿಸಿ ಕಸಾಪದ ಸದಸ್ಯತ್ವದ ಸಂಖ್ಯೆ ಹೆಚ್ಚಿಸುವ ಕೆಲಸ ಮಾಡುತ್ತೇನೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎರಡನೇ ಬಾರಿಗೆ ಚಾಮಲಾಪುರ ಗ್ರಾಮದ ಸಿ.ಆರ್.ಚಂದ್ರಶೇಖರ್ ಅಧಿಕಾರ ಸ್ವೀಕಾರ ಮಾಡಿದರು.ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಳೆದ 7 ವರ್ಷಗಳಿಂದ ಕಸಾಪ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಖರಡ್ಯ ಬಸವೇಗೌಡರಿಂದ ಕನ್ನಡ ಬಾವುಟ ಸ್ವೀಕಾರದ ಮೂಲಕ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಇಂಗ್ಲಿಷ್ ಉಪನ್ಯಾಸಕನಾಗಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದರೂ ಕೂಡ ಕನ್ನಡಪ್ರೇಮಿಯಾಗಿದ್ದೇನೆ ಎಂದರು.
ಈ ಹಿಂದೆ ಕಸಾಪ ಅಧ್ಯಕ್ಷನಾಗಿದ್ದ ವೇಳೆ ಕನ್ನಡಪರವಾದ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ತಾಲೂಕಿನಲ್ಲಿ ಕಸಾಪದ ಅರಿವು ಮೂಡಿಸಿದ್ದೇನೆ. ಅದೇ ರೀತಿ ಈ ಬಾರಿ ಪ್ರತಿ ಗ್ರಾಮ ಮಟ್ಟದಲ್ಲಿ ಕಸಾಪ ಕುರಿತಾಗಿ ಅರಿವು ಮೂಡಿಸುವ ಜತೆಗೆ ಕನ್ನಡ ಅಭಿಮಾನಿಗಳು ಹಾಗೂ ಸಾಹಿತ್ಯಸಕ್ತರನ್ನು ಗುರುತಿಸಿ ಕಸಾಪದ ಸದಸ್ಯತ್ವದ ಸಂಖ್ಯೆ ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದರು.87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಕನ್ನಡದ ತೇರನ್ನು ಎಳೆಯಲು ನನಗೆ ಅವಕಾಶ ಕಲ್ಪಿಸಿರುವ ಎಲ್ಲರಿಗೂ ನಾನು ಅಬಾರಿ ಎಂದರು.
ಜಿಲ್ಲಾ ಕಸಾಪ ಸಂಚಾಲಕಿ ಮೀರಾಶಿವಲಿಂಗಯ್ಯ ಮಾತನಾಡಿ, ಕನ್ನಡ ಜನತೆಯ ಧ್ವನಿಯಾಗಿರುವ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಆಗಿದೆ. ಕನ್ನಡದ ಕಾವಲುಗಾರನಾಗಿ ಕಸಾಪ ಕೆಲಸ ಮಾಡುತ್ತಿದೆ. ಸಾಹಿತ್ಯ, ಸಂಸ್ಕೃತಿಯನ್ನು ನಮ್ಮ ಚಿತ್ತದೊಳಗಿರಿಸುವ ಕೆಲಸವನ್ನು ಮಾಡುವ ಜತೆಗೆ ಲೌಕಿಕವಾದ ನೀತಿ ಪಾಠ ಕಲಿಸುತ್ತಿದೆ. ಕನ್ನಡದ ಶ್ರೀಮಂತಿಕೆ ಇರೊದು ಗ್ರಾಮೀಣ ಜನರಲ್ಲಿ ಮಾತ್ರ. ಗ್ರಾಮೀಣ ಮಟ್ಟದಿಂದ ಕನ್ನಡವನ್ನು ಕಟ್ಟುವ ಕೆಲಸವಾಗಬೇಕಿದೆ ಎಂದು ಕರೆಕೊಟ್ಟರು.ಈ ವೇಳೆ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಖರಡ್ಯಬಸವೇಗೌಡ, ಕರ್ನಾಟಕ ಜಾನಪದ ಅಕಾಡೆಮಿ ನಿರ್ದೇಶಕ ಅಣೆಚನ್ನಾಪುರ ಮಂಜೇಶ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ವಿ.ಹರ್ಷ, ಡಾ.ಕೃಷ್ಣೇಗೌಡ ಹುಸ್ಕೂರು, ಕನ್ನಡ ಸಂಘದ ಅಧ್ಯಕ್ಷ ಅಲಮೇಲು, ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ ಸೇರಿದಂತೆ ಹಲವರು ಇದ್ದರು.