ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಕೇಂದ್ರದಿಂದ ರಾಜಧಾನಿಯವರೆಗೆ ಬೆಳೆಯುವಲ್ಲಿ ಸಿ.ಎಸ್. ಷಡಾಕ್ಷರಿಯವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸತತ ಪರಿಶ್ರಮಗಳೇ ಪ್ರಮುಖ ಕಾರಣ. ಇದರೊಂದಿಗೆ ಅವರಲಿದ್ದ ಸೇವಾ ಮನೋಭಾವ ಮತ್ತು ಹಿಡಿದ ಕೆಲಸ ಸಾಧಿಸಬೇಕೆಂಬ ಛಲ ಅವರನ್ನು ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡಿದವು ಎಂದು ಹಿರಿಯ ವಕೀಲ ಕೆ.ಬಸಪ್ಪಗೌಡ ಶ್ಲಾಘಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸಿ.ಎಸ್.ಷಡಾಕ್ಷರಿ ಅಭಿಮಾನಿ ಬಳಗದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸೇವಾ ವಿಕಾಸ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ 47ನೇ ಹುಟ್ಟುಹಬ್ಬದ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸರ್ಕಾರದ ಇಲಾಖೆಯಲ್ಲಿ ಸಾಮಾನ್ಯ ಹುದ್ದೆಗೆ ನೇಮಕಗೊಂಡು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದವರೆಗಿನ ಸಾಧನೆ ಸಾಮಾನ್ಯವೇನಲ್ಲ. ಯಾವ ವ್ಯಕ್ತಿಯಲ್ಲಿ ಸಾಮಾಜಿಕ ಕಳಕಳಿಯ ಗುಣಗಳಿರುತ್ತವೆಯೋ ಅಂತವರಿಗೆ ಎಲ್ಲಾ ಸ್ಥಾನಮಾನಗಳು ಸಹಜವಾಗಿ ಹುಡುಕಿಕೊಂಡು ಬರುತ್ತವೆ ಎಂದರು.

ಅವರು ಷಡಾಕ್ಷರಿ ಅವರು ಕೇವಲ ಸರ್ಕಾರಿ ನೌಕರರಿಗೆ ನಾಯಕರಾಗದೇ ರಾಜ್ಯದ ಎಲ್ಲಾ ವರ್ಗದ ಜನರ ನಾಯಕರಾಗುವಂತಹ ಅವಕಾಶ ದೊರೆಯುವಂತಾಗಲಿ ಎಂದು ಆಶಿಸಿದರು.


ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಷಡಾಕ್ಷರಿಗಿಂತ ಮುಂಚೆ ರಾಜ್ಯಾಧ್ಯಕ್ಷರಾದವರು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದು ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಷಡಾಕ್ಷರಿಯವರು ಸರ್ಕಾರದೊಂದಿಗೆ ಸೌಹಾರ್ದಯುತವಾಗಿ, ಸ್ನೇಹಪೂರ್ವಕವಾಗಿದ್ದುಕೊಂಡು ಅತ್ಯಂತ ಜಾಣ್ಮೆಯಿಂದ ಸಂಘದ ಹಾಗೂ ರಾಜ್ಯದ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಷಡಾಕ್ಷರಿಯವರಲ್ಲಿ ಗುರುತಿಸಬಹುದಾದ ಗುಣಲಕ್ಷಣ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪ್ರೆಸ್‌ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಸತೀಶ್ ಕುಮಾರ್ ಶೆಟ್ಟಿ, ಡಿಎಸ್ಎಸ್ ಗುರುಮೂರ್ತಿ, ಡಾ| ವಾಣಿಕೋರಿ, ಮ.ಸ.ನಂಜುಂಡಸ್ವಾಮಿ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಪತ್ರಕರ್ತ ವೈ.ಕೆ. ಸೂರ್ಯ ನಾರಾಯಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಮೋಹನ್ಕುಮಾರ್, ಬಳ್ಳೆಕೆರೆ ಸಂತೋಷ್, ಆರ್.ಪಾಪಣ್ಣ ಮಹೇಶ್ವರಪ್ಪ, ಷಡಾಕ್ಷರಿ ಅವರ ತಾಯಿ ಬೋರಾಂಬಿಕಾ, ಪತ್ನಿ ಬೇಬಿ, ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.

ಬಾಕ್ಸ್...ವಿವಿಧ ಜನಪರ ಕಾರ್ಯಕ್ರಮಗಳು

ಹುಟ್ಟು ಹಬ್ಬದ ಅಂಗವಾಗಿ ಇಡೀ ದಿನ ವಿವಿಧೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೃದ್ಧಾಶ್ರಮದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆಶ್ರಮದಲ್ಲಿನ ವೃದ್ಧರಿಗೆ ಹಣ್ಣು ವಿತರಿಸಲಾಯಿತು. ಯಡಿಯೂರಪ್ಪ ಉಚಿತ ವಿದ್ಯಾರ್ಥಿನಿಲಯದ ಎದುರು ಸಸಿ ನೆಡಲಾಯಿತು. ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಲಾಯಿತು. ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ದೇಶೀಯ ದರ್ಶಿನಿಯ ಅವಿನಾಶ್ ಬಿದರೆ ಅವರು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಿದ್ದರು.

ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ವತಿಯಿಂದ ಶಾರದಾ ದೇವಿ ಅಂದರ ವಿಕಾಸ ಕೇಂದ್ರದಲ್ಲಿ ಮಕ್ಕಳಿಗೆ ಸಿಹಿತಿನಿಸು ಹಾಗೂ ಹಣ್ಣುಗಳನ್ನು ವಿತರಿಸಲಾಯಿತು. ------------------

23ಕೆಪಿ ಎಸ್ ಎಂಜಿ 12

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರ 47 ನೇ ಹುಟ್ಟು ಹಬ್ಬದ ಸಂಬಂಧ ನಡೆದ ಕಾರ್ಯಕ್ರಮವನ್ನು ಅವರ ತಾಯಿ ಬೋರಾಂಬಿಕಾ ಮತ್ತು ವಿವಿಧ ಗಣ್ಯರು ಜಂಟಿಯಾಗಿ ಉದ್ಘಾಟಿಸಿದರು.