ಶಿಕ್ಷಣದಲ್ಲಿ ಮಹಿಳೆಯರ ಸಾಧನೆ ಹೆಚ್ಚಿದೆ. ನಮ್ಮ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಕಾಲೇಜು ಆರಂಭದಲ್ಲಿ ಕಂಡ ಕಹಿ ಅನುಭವ ದಿನ ಕಳೆದಂತೆ ಕಷ್ಟದ ಫಲವಾಗಿ ಕಾಲೇಜು ಒಂದು ಹಂತದಲ್ಲಿ ಗುರುತಿಸಿಕೊಂಡು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಾಲೇಜಿನ ಶೈಕ್ಷಣಿಕ ಸಾಧನೆಗೆ ಈಗ ಬೆಳ್ಳಿ ಹಬ್ಬ ಆಚರಣೆ ಮಾಡಲಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಪದವಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಗುಬ್ಬಿ
ಜೀವನದಲ್ಲಿ ಸಾಧನೆ ಮಾಡುವ ಕನಸು ಹೊತ್ತ ವಿದ್ಯಾರ್ಥಿಗಳು ಯಶಸ್ಸು ಕಾಣಲು ದೃಢ ಸಂಕಲ್ಪ, ಕಠಿಣ ಪರಿಶ್ರಮ ಹಾಗೂ ನೈತಿಕ ಮೌಲ್ಯಗಳನ್ನು ಎಂದಿಗೂ ಮರೆಯದೇ ಅಳವಡಿಸಿಕೊಂಡು ಶೈಕ್ಷಣಿಕ ಸಾಧನೆಯತ್ತ ದಾಪುಗಾಲು ಹಾಕುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಬಾಹ್ಯಾಕಾಶ ವಿಜ್ಞಾನಿ ಶುಭಾ ವೆಂಕಟೇಶ್ ಅಯ್ಯಂಗಾರ್ ಸಲಹೆ ನೀಡಿದರು.ಪಟ್ಟಣದ ಚನ್ನಬಸವೇಶ್ವರ ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಅವರ ಕೌಶಲ್ಯ ಪ್ರದರ್ಶನಕ್ಕೆ ಆಯೋಜಿಸಿದ್ದ ಕೆಎನ್ ಇಡಬ್ಲ್ಯೂ ರಾಷ್ಟ್ರೀಯ ಜ್ಞಾನಜಾಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಸೋಲುಗಳು, ಟೀಕೆಗಳು ಸಾಮಾನ್ಯ. ಯಾವುದಕ್ಕೂ ಕುಗ್ಗದೆ ಹಿಗ್ಗದೆ ಮುನ್ನಡೆದು ತಂಡದ ಕೆಲಸದ ಮೇಲೆ ಏಕಾಗ್ರತೆ ಸಾಧಿಸಿ ಎಂದು ಕಿವಿಮಾತು ಹೇಳಿದರು.
ಕಳೆದ ಐವತ್ತು ವರ್ಷಗಳ ಹಿಂದೆ ಸಂಶೋಧನಾ ಸಲಕರಣೆ ಹಂಚುವುದೇ ಕಷ್ಟವಾಗಿತ್ತು. ಈಗ ನಮ್ಮಲ್ಲೇ ಉತ್ಪಾದನೆ ನಡೆದಿದೆ. ಶಿಕ್ಷಣದಲ್ಲಿ ಸಹ ಸುಧಾರಣೆ ಕಂಡಿದೆ. ಅಧ್ಯಯನಕ್ಕೆ ನಾನಾ ಆಯ್ಕೆಗಳು ಇಲ್ಲಿವೆ. ತಾಂತ್ರಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬಹುದಾಗಿದೆ ಎಂದ ಅವರು, ವಿಮಾನ ನಿಲ್ದಾಣಗಳು ಮತ್ತು ರಕ್ಷಣಾ ಕ್ಷೇತ್ರಕ್ಕೆ ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿ ಕೆಲಸಕ್ಕೆ ನಮ್ಮ ತಂಡ ದುಡಿದಿದೆ. ಪ್ರಸ್ತುತ 172 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮ್ಮ ಟೆಕ್ನಾಲಜಿ ಬಳಕೆಯಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.ಸಿಐಟಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಸ್.ಬಸವರಾಜು ಮಾತನಾಡಿ, ಗ್ರಾಮೀಣ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಒದಗಿಸುವ ಕನಸು ನನಸು ಮಾಡಲು 2001ರಲ್ಲಿ ಕಾಲೇಜು ಆರಂಭಕ್ಕೆ ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರ ಮೂಲಕ ಗುದ್ದಲಿಪೂಜೆ ಮಾಡಿದಾಗ ನನಗೆ ಪ್ರೋತ್ಸಾಹಕ್ಕಿಂತಲೂ ಕಾಲು ಎಳೆದವರೇ ಹೆಚ್ಚು. ಆದರೂ ಜ್ಯೋತಿ ಗಣೇಶ್, ಸುರೇಶ್ ಹಾಗೂ ಶಾಂತಲಾ ಸೇರಿ ಪಟ್ಟ ಶ್ರಮದ ಫಲ ಈಗ ಸಾವಿರಾರು ಹಳ್ಳಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಕ್ಕಿದೆ. ರೈತನ ಮಕ್ಕಳು ದೇಶ- ವಿದೇಶದಲ್ಲಿ ಉನ್ನತ ಸ್ಥಾನಮಾನ ಕಂಡಿದ್ದಾರೆ ಜತೆಗೆ 52 ಎಕರೆ ಪ್ರದೇಶದಲ್ಲಿ ನರ್ಸರಿಯಿಂದ ಪಿಯು ಶಿಕ್ಷಣ ಆರಂಭಿಸಿದ್ದೇವೆ. ಮತ್ತಷ್ಟು ಉನ್ನತ ಶಿಕ್ಷಣಕ್ಕೆ ಕೂಡಾ ಸಿದ್ಧ ಮಾಡಿಕೊಂಡಿದ್ದೇವೆ ಎಂದರು.
ಸಿಐಟಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಮಾತನಾಡಿ, ಶಿಕ್ಷಣದಲ್ಲಿ ಮಹಿಳೆಯರ ಸಾಧನೆ ಹೆಚ್ಚಿದೆ. ನಮ್ಮ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಕಾಲೇಜು ಆರಂಭದಲ್ಲಿ ಕಂಡ ಕಹಿ ಅನುಭವ ದಿನ ಕಳೆದಂತೆ ಕಷ್ಟದ ಫಲವಾಗಿ ಕಾಲೇಜು ಒಂದು ಹಂತದಲ್ಲಿ ಗುರುತಿಸಿಕೊಂಡು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಾಲೇಜಿನ ಶೈಕ್ಷಣಿಕ ಸಾಧನೆಗೆ ಈಗ ಬೆಳ್ಳಿ ಹಬ್ಬ ಆಚರಣೆ ಮಾಡಲಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಪದವಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಕೆ.ಎಂ.ಶಿವಕುಮಾರ್, ಶ್ರೀಧರ್.ಕೆ.ಎನ್.ರಾವ್ ಸೇರಿದಂತೆ ಸಿಐಟಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.