ಮಕ್ಕಳಿಗೆ ಫೋಕ್ಸೋ ಕಾಯಿದೆ ಮತ್ತು ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಕಾನೂನು ಸೇವೆಗಳ ಸಮಿತಿಯು ಜಾಗೃತಿ ವಾರವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ವಿವಿಧ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಕ್ಕಳಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಹಕ್ಕುಗಳು, ಸುರಕ್ಷತೆ ಮತ್ತು ಕಾನೂನಿನ ರಕ್ಷಣೆಯ ಬಗ್ಗೆ ತಿಳಿಸುವುದರಿಂದ ಅನೇಕ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಪೋಕ್ಸೋ ಕಾಯಿದೆಯ ಬಗ್ಗೆ ಪ್ರತಿಯೊಬ್ಬ ಹೆಣ್ಣು ಮಗುವಿಗೂ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಪಿ. ಕಿರಣ್ ತಿಳಿಸಿದರು.ತಾಲೂಕಿನ ಹೇರೂರು ಗ್ರಾಮದ ಭೂಮಿ ಪಬ್ಲಿಕ್ ಸ್ಕೂಲ್ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಸರ್ಕಾರಿ ಅಭಿಯೋಜನಾ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ನಡುವಿನ ವ್ಯತ್ಯಾಸ ತಿಳಿದುಕೊಂಡು, ಯಾವುದೇ ಅಹಿತಕರ ಘಟನೆಗಳು ಎದುರಾದಾಗ ಧೈರ್ಯದಿಂದ ಅದನ್ನು ತಿಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಪಠ್ಯಪುಸ್ತಕ ಇಲಾಖೆಯು ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಕುರಿತು ಅರಿವು ಮೂಡಿಸುವ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿದೆ. ಮಕ್ಕಳು ತಮ್ಮ ದೇಹದ ಸುರಕ್ಷತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ತಿಳಿದುಕೊಳ್ಳಬೇಕು. ಯಾರಾದರೂ ಅಹಿತಕರವಾಗಿ ವರ್ತಿಸಿದರೆ ಅಥವಾ ಕಿರುಕುಳ ನೀಡಿದರೆ ಅದನ್ನು ಮುಚ್ಚಿಡದೆ ತಕ್ಷಣ ಪೋಷಕರು, ಶಿಕ್ಷಕರು ಅಥವಾ ತಮಗೆ ನಂಬಿಕಸ್ಥರೆನಿಸುವ ವ್ಯಕ್ತಿಗಳ ಗಮನಕ್ಕೆ ತರಬೇಕು. ಇಂತಹ ಸಂದರ್ಭಗಳಲ್ಲಿ ಭಯಪಡದೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ನೆರವು ಪಡೆಯಬಹುದು. ಮಕ್ಕಳ ಸುರಕ್ಷತೆ ಕಾಪಾಡುವುದು ಕುಟುಂಬ, ಶಾಲೆ ಹಾಗೂ ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದರು.ಗುಬ್ಬಿ ಠಾಣೆಯ ಐಪಿಐ ರಾಜೇಶ್ವರಿ ಮಾತನಾಡಿ, 18 ವರ್ಷದೊಳಗಿನ ಎಲ್ಲ ಮಕ್ಕಳ ರಕ್ಷಣೆಗಾಗಿ 2012ರಲ್ಲಿ ಫೋಕ್ಸೋ ಕಾಯಿದೆ ಜಾರಿಗೆ ತರಲಾಗಿದೆ. ಈ ಕಾಯಿದೆಯಡಿ ಬಾಲಕ ಮತ್ತು ಬಾಲಕಿ ಎಂಬ ಯಾವುದೇ ತಾರತಮ್ಯವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ ರಕ್ಷಣೆ ಒದಗಿಸಲಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಶೋಷಣೆ ಅಥವಾ ಕಿರುಕುಳ ಎಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧದ ಸ್ವರೂಪ ಮತ್ತು ಗಂಭೀರತೆ ಆಧರಿಸಿ ಶಿಕ್ಷೆಯ ಪ್ರಮಾಣ ನಿರ್ಧರಿಸಲಾಗುತ್ತದೆ. ಮಕ್ಕಳು ತಮಗಾಗುವ ಅನ್ಯಾಯದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ಪೋಷಕರು ಮತ್ತು ಶಿಕ್ಷಕರು ನಿರ್ಮಿಸಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಸಿ.ಕೆ. ರವೀಂದ್ರ ಮಾತನಾಡಿ, ಮಕ್ಕಳಿಗೆ ಫೋಕ್ಸೋ ಕಾಯಿದೆ ಮತ್ತು ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಕಾನೂನು ಸೇವೆಗಳ ಸಮಿತಿಯು ಜಾಗೃತಿ ವಾರವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ವಿವಿಧ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಕ್ಕಳಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಹಕ್ಕುಗಳು, ಸುರಕ್ಷತೆ ಮತ್ತು ಕಾನೂನಿನ ರಕ್ಷಣೆಯ ಬಗ್ಗೆ ತಿಳಿಸುವುದರಿಂದ ಅನೇಕ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಭೂಮಿ ಪಬ್ಲಿಕ್ ಸ್ಕೂಲ್ ಶೈಕ್ಷಣಿಕ ನಿರ್ದೇಶಕ ಧನಂಜಯ್, ಸಹಾಯಕ ಸರ್ಕಾರಿ ಅಭಿಯೋಜಕಿ ಕುಮಾರಿ ಅಕ್ಷತಾ ವಿಶ್ವನಾಥ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವೀಶ್, ಪ್ರಾಂಶುಪಾಲರಾದ ಮೆಹನಜ್ ಖಾದ್ರಿ, ಮುಖ್ಯಶಿಕ್ಷಕಿ ಜಿ.ಎಸ್. ಭವ್ಯ ಸೇರಿ ಶಿಕ್ಷಕರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.