ಕನ್ನಡಪ್ರಭ ವಾರ್ತೆ ಶಿವಮೊಗ್ಗ ನೀಟ್ ಪರೀಕ್ಷೆಯ ಅಕ್ರಮ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯು ಕಾಂಗ್ರೆಸ್ ಮತ್ತು ಬಿಜೆಪಿ ಕಚೇರಿಗಳ ಮೇಲೆ ಎದುರು ಪಕ್ಷದಿಂದ ದಾಳಿ ಮತ್ತು ಪ್ರತಿದಾಳಿ, ವಾಗ್ವಾದ, ರಸ್ತೆ ತಡೆ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತಲ್ಲದೆ, ಕೆಲಕಾಲ ಉದ್ವಿಗ್ನ ಸ್ಥಿತಿ ಕೂಡ ನಿರ್ಮಾಣಗೊಂಡಿತ್ತು.
ನಗರದ ಮಹಾವೀರ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ನೇತೃತ್ವದಲ್ಲಿ ಸುರಿಯುತ್ತಿರುವ ಮಳೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾಂಗ್ರೆಸ್ ನಾಯಕರು ಸೇರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಇಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಹೊತ್ತಿನಲ್ಲಿಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಬೇಧಿಸಿ ನುಗ್ಗಿದ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಇನ್ನಿಲ್ಲದ ಯತ್ನ ನಡೆಸಿದರು. ಪೊಲೀಸರು ಬಿಜೆಪಿ ಕಚೇರಿಯ ಬಾಗಿಲು ಹಾಕಿದರು. ಆ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ಪೊಲೀಸ್ ವಾಹನದ ಮೇಲೆ ಹತ್ತಿ ಕಾಂಗ್ರೆಸ್ ಧ್ವಜಹಾರಿಸಿ ಧಿಕ್ಕಾರ ಕೂಗಿದರು. ಯುವ ಕಾಂಗ್ರೆಸ್ ಗುಂಪು, ಪಕ್ಕದಲ್ಲಿದ್ದ ಗ್ರಾಮಾಂತರ ಬಿಜೆಪಿ ಕಛೇರಿಗೆ ನುಗ್ಗಿ ಪಿಠೋಪಕರಣ ಧ್ವಂಸಕ್ಕೆ ಯತ್ನಿಸಿತು. ಪೊಲೀಸರು ಹರಸಾಹಸ ಮಾಡಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಶರತ್ ಮರಿಯಪ್ಪ, ಕೇಶವ, ಎಂ.ಬಿ. ಪ್ರವೀಣ್, ಕುಮರೇಶ್, ಜಿ.ಡಿ. ಮಂಜುನಾಥ್, ಕೆ.ರಂಗನಾಥ್, ರಾಹುಲ್, ಮಿಥುನ್, ಆರೀಫ್ ಮತ್ತಿತರರಿದ್ದರು.ಬಿಜೆಪಿ ದಾಳಿ:
ಈ ದಾಳಿಯ ಸುದ್ದಿ ಗೊತ್ತಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹರಿಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಗೆ ನುಗ್ಗಲು ವಿಫಲ ಯತ್ನ ನಡೆಸಿದರು. ಪೊಲೀಸರು ತಡೆದರು. ಕಾಂಗ್ರೆಸ್ ಪಕ್ಷದ ಹೊರಗಿದ್ದ ಬ್ಯಾನರ್ ಅನ್ನು ಬಿಜೆಪಿ ಕಾರ್ಯಕರ್ತರು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಬೇಷರತ್ ಕ್ಷಮೆಗೆ ಆಗ್ರಹ:ಬೆಳಿಗ್ಗೆ ಆರಂಭದಲ್ಲಿ ಮಹಾವೀರ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಶಾಂತವಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕೆಲ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಬಂಧಿಸಿದ್ದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ಬೇಷರತ್ ಕ್ಷಮೆ ಕೇಳಬೇಕು. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ಗಂಭೀರ ಗಾಯಗೊಂಡ ಪ್ರತಿಭಟನಾಕಾರರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು. ನೀಟ್ ಸಮಾನಾಂತರ ಪರೀಕ್ಷೆ ನಡೆಸಲು ಎಲ್ಲಾ ರಾಜ್ಯಗಳಿಗೂ ಅವಕಾಶ ನೀಡಬೇಕು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್ , ಪ್ರಮುಖರಾದ ಹೆಚ್.ಎಸ್. ಸುಂದರೇಶ್, ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ವಿಶ್ವನಾಥ್ ಕಾಶಿ, ರಮೇಶ್ ಶಂಕರ್ ಘಟ್ಟ, ಎಸ್.ಟಿ.ಚಂದ್ರಶೇಖರ್, ನಾಗರಾಜ್ ಕಂಕಾರಿ, ಕಲೀಂಪಾಷಾ, ಪ್ರವೀಣ್, ವಿಜಯಲಕ್ಷ್ಮೀ ಪಾಟೀಲ್, ಸ್ಟೆಲ್ಲಾ ಮಾರ್ಟಿನ್, ಸುವರ್ಣಾ ನಾಗರಾಜ್, ರಂಗನಾಥ್, ಸೈಯದ್ ವಾಹಿದ್ ಅಡ್ಡು, ಹೆಚ್.ಪಿ. ಗಿರೀಶ್ ಮೊದಲಾದವರಿದ್ದರು.
ಬಿಜೆಪಿಯಿಂದ ರಸ್ತೆ ತಡೆ:ಕಾಂಗ್ರೆಸ್ ದಾಳಿ, ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಕೆ. ಜಗದೀಶ್, ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣ, ಮಾಜಿ ಶಾಸಕ ಅಶೋಕ್ ನಾಯಕ್, ಸುರೇಖಾ ಮುರುಳೀಧರ್ ಸೇರಿದಂತೆ ಪಕ್ಷದ ನಾಯಕರುಗಳ ನೇತೃತ್ವದಲ್ಲಿ ಶಿವಪ್ಪ ನಾಯಕ ಪ್ರತಿಮೆ ಎದುರು ರಸ್ತೆತಡೆ ಮಾಡಿ ಅಲ್ಲಿಯೇ ಧರಣಿ ಕೂತು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಯ ಬಾಗಿಲು ಹಾಕಿಸಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಾಗಿಲು ಮುಚ್ಚುವಂತೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪೊಲೀಸ್ ವಾಹನ ಏರಿದ ಕಾಂಗ್ರೆಸ್ ಗೂಂಡಾಗಳನ್ನು ತಕ್ಷಣ ಬಂಧಿಸಿ, ಎಫ್ಐಆರ್ ದಾಖಲಿಸಬೇಕು. ಬಿಜೆಪಿ ಕಚೇರಿ ನುಗ್ಗಲು ಯತ್ನಿಸಿದರೂ ಅವರನ್ನು ತಡೆಯಲು ವಿಫಲವಾದ ಪೊಲೀಸ್ ಇಲಾಖೆ ಬಗ್ಗೆ ಅವರು ಕಿಡಿಕಾರಿ ಪೊಲೀಸ್ ಇಲಾಖೆ ಕಾಂಗ್ರೆಸ್ ಚೇಲಾಗಳಾಗಿವೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಅಕ್ಷಯ್, ದರ್ಶನ್, ಚಿದಾನಂದ, ಶಿವಾನಂದ, ರಾಹುಲ್ ಬಿದಿರೆ, ಪ್ರದೀಪ್ ಹೊನ್ನಪ್ಪ, ಬಿಳಿಕಿ ಕೃಷ್ಣಮೂರ್ತಿ ಮತ್ತಿತರಿದ್ದರು. ---------------------------------------
23ಕೆಪಿ ಎಸ್‌ಎಂಜಿ 07ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಮುಖಂಡ ಗಿರೀಶ್ ಅವರನ್ನು ಪೊಲೀಸರು ಬಲವಂತವಾಗಿ ತಡೆದರು.
---------------------------23ಕೆಪಿ ಎಸ್‌ಎಂಜಿ 05ನೀಟ್ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಕೇಂದ್ರ ಸಚಿವ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಪ್ರಧಾನಿ ಮತ್ತು ಕೇಂದ್ರ ಸರ್ಕಾರ ಕ್ಷಮೆ ಕೋರುವಂತೆ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಮಹಾವೀರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
---------------------------------23ಕೆಪಿ ಎಸ್‌ಎಂಜಿ 03ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ನಡೆಯನ್ನು ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.