ರಾಜ್ಯ ಸರ್ಕಾರ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 71 ಸಾಧಕರ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಮೂಲದ ಮೂವರಿಗೆ ಈ ಗೌರವ ಪುರಸ್ಕಾರ ಒಲಿದಿದೆ.
- ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿರಾಜ್ಯ ಸರ್ಕಾರ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 71 ಸಾಧಕರ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಮೂಲದ ಮೂವರಿಗೆ ಈ ಗೌರವ ಪುರಸ್ಕಾರ ಒಲಿದಿದೆ.ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ಪ್ರೊ. ರಾಜಾಸಾಬ್ ಎ.ಎಚ್., ಸಮಾಜಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಜೇವರ್ಗಿಯ ಸೊನ್ನದ ಅನ್ನದ ಮಠ ಎಂದೇ ದಾಸೋಹಕ್ಕೆ ಹೆಸರಾಗಿರುವ ಡಾ. ಶಿವಾನಂದ ಮಹಾಸ್ವಾಮೀಜಿ ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸಂಗೀತಾ ಕಟ್ಟಿಮನಿ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಕಲಬುರಗಿ ಜಿಲ್ಲೆಯ ಮೂವರು ಅರ್ಹ ಸಾಧಕರಿಗೆ ರಾಜ್ಯಮಟ್ಟದ ಈ ಪ್ರತಿಷ್ಠಿತ ಗೌರವ ಲಭಿಸಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.- ಡಾ. ಸಂಗೀತಾ ಕಟ್ಟೀಮನಿ: ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಸೇವೆಯಿಂದ ನಿವೃತ್ತರಾಗಿರುವ ಡಾ. ಸಂಗೀತಾ ಕಟ್ಟೀಮನಿ ಕಲ್ಯಾಣ ಕರ್ನಾಟಕ ಭಾಗದ ಸಮಾಜೋ ಆರ್ಥಿಕ ಬೆಳವಮಿಗೆಗಳ ಮೇಲೆ ಸದಾಕಾಲ ಕಣ್ಣಿಟ್ಟು ವಿಶ್ಲೇಷಣೆ ಮಾಡುವವರು. ಅವರ ಈ ಅಧ್ಯಯನಶೀಲ ಧೋರಣೆಯೇ ಅವರನ್ನು ಸದಾಕಾಲ ಕ್ರಿಯಾಶೀಲರಾಗಿರುವಂತೆ ಮಾಡಿದೆ. ಈಗಾಗಲೇ ಹತ್ತು ಹಲವು ಪುರಸ್ಕಾರಗಳು ಪಡೆದಿರುವ ಡಾ. ಸಂಗೀತಾ ಅವರು ಈಚೆಗೆ ಸುದ್ದಿ ಮಾಡಿದ್ದ ಪ್ರಾದೇಶಿಕ ಅಸಮತೋಲನ ನಿವಾರಣೆ ಅಧ್ಯಯನ ಮಾಡಲು ಸರ್ಕಾರ ನೇಮಕ ಮಾಡಿದ್ದ ಪ್ರೊ. ಜಿಕೆ ಗೋವಿಂದರಾವ್ ಹೈ ಪವರ್ ಕಮೀಟಿಯ ಸದಸ್ಯರಾಗಿಯೂ ಕೆಲಸ ಮಾಡಿದವರು. ಈಚೆಗಷ್ಟೇ ವಿಜಯಪೂರ ಅಕ್ಕಮಹಾದೇವಿ ವಿವಿ ಗೌರವ ಡಾಕ್ಟರೇಟ್ ಪಡೆದಿರುವ ಸಂಗೀತಾ ಕಟ್ಟೀಮನಿ ಮುಡಿಗೆ ಇದೀಗ ರಾಜ್ಯೋತ್ಸವ ಪುರಸ್ಕಾರದ ಗರಿ ಸೇರಿಕೊಂಡಿದೆ.ಪ್ರೊ. ರಾಜಾಸಾಬ್ ಎಎಚ್: ಬೋಧನೆ, ಸಂಶೋಧನೆಯಲ್ಲಿ 4 ದಶಕಗಳ ಅನುಭವ ಹಾಗೂ ಉನ್ನತ ಶಿಕ್ಷಣ ಆಡಳಿತದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪ್ರೊ. ರಾಜಾಸಾಬ್ ಪ್ರಸ್ತುತ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರು. ತುಮಕೂರು ವಿವಿ ಕುಲಪತಿಗಳಾಗಿ, ಗುಲ್ಬರ್ಗ ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್, ಕುಲಸಚಿವರಾಗಿ (ಮೌಲ್ಯಮಾಪನ), ಅಂತಾರಾಷ್ಟ್ರೀಯ ಮಟ್ಟದಲ್ಲಿ, ಕ್ಯಾಲಿಫೋರ್ನಿಯಾ, ಚೀನಾದ ತಿಯಾಂಜಿನ್ ಕೃಷಿ ವಿವಿ, ಹಿಲಿಯಾಂಗ್ ಜಿಯಾಂಗ್ ಬಾಯಿ ಕೃಷಿ ವಿವಿ, ಸೌದಿ ಅರೇಬಿಯಾ, ಇಥಿಯೋಪಿಯಾ ಮತ್ತು ಎರಿಟ್ರಿಯಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಸ್ಯಶಾಸ್ತ್ರ, ಸಸ್ಯ ರೋಗಶಾಸ್ತ್ರ, ಸಸ್ಯ ಜೈವಿಕ ತಂತ್ರಜ್ಞಾನ, ಸೂಕ್ಷ್ಮಜೀವಶಾಸ್ತ್ರ, ಸಸ್ಯಗಳು ಮತ್ತು ಪರಿಸರ ಸಂರಕ್ಷಣೆ ಇವರ ಪರಿಣತಿಯ ಕ್ಷೇತ್ರಗಳು. ಶಿವಮೊಗ್ಗ ಜಿಲ್ಲೆ ಚೆನ್ನಗಿರಿಯ ನವಿಲೇಹಾಳದವರಾದ ಇವರು ತಮ್ಮ ಸೇವೆಯಲ್ಲಿನ ಸಿಂಹಪಾಲು ಕಲಬುರಗಿಯಲ್ಲೇ ಕಳೆದವರು.ಡಾ. ಶಿವಾನಂದ ಮಹಾಸ್ವಾಮೀಜಿ, ಸೊನ್ನ: ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಸಿದ್ದಲಿಂಗೇಶ್ವರ ಮಠದ ಪೀಠಾಧಿಪತಿ ಡಾ. ಶಿವಾನಂದ ಮಹಾಸ್ವಾಮಿಗಳು ಕಾವಿಧಾರಿಯಾಗಿ ಮಠದಲ್ಲಿ ಕುಳಿತುಕೊಳ್ಳದೆ ಸಮಾಜದಲ್ಲಿನ ಜನರ ಸಂಕಷ್ಟಗಳಿಗೆ ಅನ್ನ ದಾಸೋಹ, ಅಕ್ಷರ ದಾಸೋಹದ ಮೂಲಕ ಮಿಡಿದವರು. ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟು ಮಾತೃ ಹೃದಯ ಮೆರೆದವರು. ಸೊನ್ನದ ಮಠಕ್ಕೆ ಗುರುಸಿದ್ದ ಸ್ವಾಮಿಗಳ ನಂತರ ಉತ್ತರಾಧಿಕಾರಿಯಾಗಿ 1992 ರಲ್ಲಿ ಪೀಠಕ್ಕೆ ಬಂದ ಶಿವಾನಂದ ಸ್ವಾಮೀಜಿ ಶಿವಾನಂದ ಶಿವಯೋಗಿ ಜನಕಲ್ಯಾಣ ಸಂಸ್ಥೆ ಆರಂಭಿಸಿ ಕಲ್ಯಾಣ ಕೆಲಸಗಳಿಗೆ ಶ್ರೀಕರ ಬರೆದವರು. ತ್ರಿವಿಧ ದಾಸೋಹಿ ಡಾ. ಶಿವಾನಂದ ಸ್ವಾಮೀಜಿಗಳು ಸದಾಕಾಲ ಸಮಾಜಮುಖಿ ಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಾನು ಆರ್ಥಶಾಸ್ತ್ರ ಉಪನ್ಯಾಸಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದವಳು. ಸಮಾಜೋ ಆರ್ಥಿಕ ವಿಷಯಗಳಲ್ಲಿನ ನನ್ನ ಆಸಕ್ತಿ ಸಂಶೋಧನೆಗಳು ಸಮಾಜಮುಖಿಯಾಗಿ ಕೆಲಸ ಮಾಡಲು ಹೆಚ್ಚು ಅನುಕೂಲವಾದವು. ಕಲ್ಯಾಣ ನಾಡು ಸೇರಿದಂತೆ ರಾಜ್ಯದ ಆರೋಗ್ಯ, ಶಿಕ್ಷಣ, ಆರ್ಥಿಕತೆಯಂತಹ ಹಲವಾರು ಮುಖ್ಯ ರಂಗಗಳಲ್ಲಿನ ಬೆಳವಮಿಗೆಗಳ ಬಗೆಗಿನ ಅಧ್ಯಯನಪೂರ್ಣ ಅನಸಿಕೆಗಳು, ಸಂಶೋಧನಾ ವರದಿಗಳಿಗೆ ಮಾಧ್ಯಮಗಳೇ ವೇದಿಕೆ ಕಲ್ಪಿಸಿ ಜನಮನಕ್ಕೆ ತಲುಪಸಿವೆ. ರಾಜ್ಯೋತ್ಸವ ಪುರಸ್ಕಾರ ಸಂತಸ ತಂದಿದೆ ಎಂದು ಶಿಕ್ಷಣ ತಜ್ಞೆ ಡಾ. ಸಂಗೀತಾ ಕಟ್ಟೀಮನಿ ಹೇಳಿದರು.