ಚಿಕ್ಕಮಗಳೂರಲ್ಲಿ ಸಿ.ಟಿ.ರವಿಗೆ ಅದ್ಧೂರಿ ಸ್ವಾಗತ

| Published : Dec 23 2024, 01:00 AM IST

ಸಾರಾಂಶ

ಚಿಕ್ಕಮಗಳೂರು: ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರ ಚಿಕ್ಕಮಗಳೂರಿಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.ಮಾಗಡಿ ಚೆಕ್ ಪೋಸ್ಟ್ ಬಳಿ ಕಾದಿದ್ದ ಅಭಿಮಾನಿಗಳು ರಾತ್ರಿ 10.30ಕ್ಕೆ ಆಗಮಿಸಿದ ಸಿ.ಟಿ.ರವಿ ಅವರಿಗೆ ಹೂವು ಹಾಗೂ ಹಣ್ಣಿನ ಹಾರಗಳನ್ನು ಹಾಕಿ ಸ್ವಾಗತಿಸಿದರು. ಕಾರ್ಯಕರ್ತರು ಹಾಗೂ ಅಬಿಮಾನಿಗಳ ಬೈಕ್ ಹಾಗೂ ಕಾರುಗಳ ರ್‍ಯಾಲಿಯ ಮೂಲಕ ನಗರಕ್ಕೆ ಕರೆ ತರಲಾಯಿತು. ನಗರಕ್ಕೆ ಬರುವ ಮಾರ್ಗ ಮಧ್ಯೆ ಹಿರೇಮಗಳೂರಿನಲ್ಲಿಯೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಸಿ.ಟಿ.ರವಿ ತಮ್ಮ ಪತ್ನಿ ಜೊತೆ ಮನೆ ಸಮೀಪದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ । ಬೆಳಗಾವಿ ಘಟನೆ ಹಕ್ಕುಚ್ಯುತಿ ಮಂಡಿಸುವೆ: ಸಿ.ಟಿ. ರವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು:

ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರ ಚಿಕ್ಕಮಗಳೂರಿಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.ಮಾಗಡಿ ಚೆಕ್ ಪೋಸ್ಟ್ ಬಳಿ ಕಾದಿದ್ದ ಅಭಿಮಾನಿಗಳು ರಾತ್ರಿ 10.30ಕ್ಕೆ ಆಗಮಿಸಿದ ಸಿ.ಟಿ.ರವಿ ಅವರಿಗೆ ಹೂವು ಹಾಗೂ ಹಣ್ಣಿನ ಹಾರಗಳನ್ನು ಹಾಕಿ ಸ್ವಾಗತಿಸಿದರು. ಕಾರ್ಯಕರ್ತರು ಹಾಗೂ ಅಬಿಮಾನಿಗಳ ಬೈಕ್ ಹಾಗೂ ಕಾರುಗಳ ರ್‍ಯಾಲಿಯ ಮೂಲಕ ನಗರಕ್ಕೆ ಕರೆ ತರಲಾಯಿತು. ನಗರಕ್ಕೆ ಬರುವ ಮಾರ್ಗ ಮಧ್ಯೆ ಹಿರೇಮಗಳೂರಿನಲ್ಲಿಯೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.ಇನ್ನು ಆಜಾದ್ ಪಾರ್ಕ್ ಬಳಿ ಕಾದು ಕುಳಿತಿದ್ದ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಅವರು ಆಗಮಿಸುತ್ತಿದ್ದಂತೆ ಹೂಮಳೆ ಸುರಿಸಿದರು. ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು‌. ಆಜಾದ್ ಪಾರ್ಕ್ ವೃತ್ತದಿಂದ ಹನುಮಂತಪ್ಪ ವೃತ್ತ ಮಾರ್ಗವಾಗಿ ಸಿ.ಟಿ.ರವಿ ಅವರ ಮನೆಯವರೆಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿಗೆ ಬಂದ ನಂತರ ಸಿ.ಟಿ.ರವಿ ತಮ್ಮ ಪತ್ನಿ ಜೊತೆ ಮನೆ ಸಮೀಪದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಸಿ.ಟಿ.ರವಿವಿಶೇಷ ಪೂಜೆ ಸಲ್ಲಿಸಿದರು. -- ಬಾಕ್ಸ್--

ಬೆಳಗಾವಿ ಘಟನೆ ಹಕ್ಕುಚ್ಯುತಿ ಮಂಡಿಸುವೆಚಿಕ್ಕಮಗಳೂರು: ವಿಧಾನಪರಿಷತ್ ನಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಕ್ಕುಚ್ಯುತಿ ಯನ್ನು ಮಂಡಿಸುತ್ತೇವೆ ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರು ನೀಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೊಲೆ ಮಾಡಲು ಯಾರು ಯಾರು ಪ್ರಯತ್ನ ಮಾಡಿದರು ಎಂಬ ಬಗ್ಗೆ ದೂರನ್ನು ನೀಡಿದ್ದೇವೆ. ಆದರೆ ಇನ್ನೂ ಎಫ್ಐಆರ್ ರಿಜಿಸ್ಟರ್ ಆಗಿಲ್ಲ. ಕೊಲೆ ಮಾಡಲು ಯತ್ನಿಸಿದವರು ಹಾಗೂ ಅವರಿಗೆ ಕುಮ್ಮಕ್ಕು ಕೊಟ್ಟವರನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಬೆಳಗಾವಿ ಚಲೋ ಹೋರಾಟ ಮಾಡೋಣ ಎಂದು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರು ತಿಳಿಸಿದ್ದಾರೆ ಎಂದರು.ಬೆಳಗಾವಿಯಿಂದ ನೀವು ಬದುಕಿ ಬಂದಿದ್ದೇ ಹೆಚ್ಚು ಎಂದು ಕೆಲವರು ಹೇಳಿದರು. ಯಾರು ಏನು ಮಾಡುತ್ತಾರೆ ನೋಡೋಣ ಬೆಳಗಾವಿಗೆ ಬನ್ನಿ ಎಂದು ಬೆಳಗಾವಿ ಜನ ಹೇಳುತ್ತಿದ್ದಾರೆ ಎಂದು ತಿಳಿಸಿದರು.ಹಮ್ಮುರಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ಮಾತ್ರ ಕೊಲೆ, ಹತ್ಯೆ ಮಾಡುವುದು. ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಅವರಿಗೆ ನಂಬಿಕೆ ಇರುವುದು ಹಮ್ಮುರಬಿ ಸಿದ್ಧಾಂತದ ಮೇಲೆ ಎಂಬುದು ಅವರ ಮಾತಿನಿಂದಲೇ ಅರ್ಥವಾಗುತ್ತಿದೆ. ನಾನು ಕೊಟ್ಟಿರುವ ದೂರನ್ನು ಇದುವರೆಗೂ ಏಕೆ ರಿಜಿಸ್ಟರ್ ಮಾಡಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ತಿಳಿಸಬೇಕು. ಕಾನೂನಿನಲ್ಲಿ ನ್ಯಾಯ ಪಡೆಯುವ ಅಧಿಕಾರ ನನಗಿಲ್ಲವೇ ಎಂದು ಪ್ರಶ್ನಿಸಿದರು.ವಿಧಾನಪರಿಷತ್ ನಲ್ಲಿ ಆದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವುದು ಸತ್ಯಾಸತ್ಯತೆ ಹೊರಬರಲಿ ಎಂಬ ಕಾರಣಕ್ಕೆ ಎಂದ ಅವರು, ಬೆಳಗಾವಿಯಿಂದ ನನ್ನನ್ನು ನಿಗೂಢ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದು ಯಾವುದೋ ಅಪರಿಚಿತರಲ್ಲ. ಬದಲಾಗಿ ಕರ್ನಾಟಕ ರಾಜ್ಯ ಪೊಲೀಸರು. ಪೊಲೀಸರಿಗೆ ಆಗಾಗ ಡೈರೆಕ್ಷನ್ ಬರುತ್ತಾ ಇತ್ತು. ಹೀಗಾಗಿಯೇ ಪೊಲೀಸರ ಕಾಲ್ ರೆಕಾರ್ಡ್ ಚೆಕ್ ಮಾಡಿ ಎಂದು ಒತ್ತಾಯಿದ್ದೇನೆ ಎಂದರು.ಮಾಧ್ಯಮ ಸ್ನೇಹಿತರು ಇಲ್ಲದೆ ಇದ್ದಿದ್ದಲ್ಲಿ ಬೇರೆಯದೇ ಹುನ್ನಾರ ಮಾಡುತ್ತಿದ್ದರು. ಪ್ರಕರಣದಲ್ಲಿ ಮುಖ್ಯಮಂತ್ರಿ ಪಾತ್ರ ಇಲ್ಲ ಎಂದು ಮೊದಲು ಭಾವಿಸಿದ್ದೆ. ಆದರೆ ಇದೀಗ ಎಲ್ಲರೂ ಸೇರಿಯೇ ಷಡ್ಯಂತರ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ನವರಿಗೆ ಒಂದು ಕಾನೂನು ಹಾಗೂ ಬಿಜೆಪಿಯವರಿಗೆ ಒಂದು ಕಾನೂನು ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

--

ಡ್ರೋನ್ ಕ್ಯಾಮರಾ ಛಾಯಾಗ್ರಾಹಕ ಅಸ್ವಸ್ಥಚಿಕ್ಕಮಗಳೂರು : ಸಿ. ಟಿ ರವಿ ರಾತ್ರಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ವೇಳೆ ನಡೆದ ರೋಡ್‌ ಶೋ ವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದ ಕೆಲಸ ಮಾಡುವ ವೇಳೆ ಕುಸಿದು ಬಿದ್ದು ಛಾಯಾಗ್ರಾಹಕರು ಅಸ್ವಸ್ಥಗೋಡಿರುವ ಘಟನೆ ನಡೆದಿದೆ.ಛಾಯಾಗ್ರಾಹಕ ಅವಿನಾಶ್ ಸ್ಥಿತಿ ಗಂಭೀರವಾಗಿದೆ.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸ್ವಾಗತ ಕಾರ್ಯಕ್ರಮದಲ್ಲಿ ಈ ದುರ್ಘಟನೆ ನಡೆದಿದ್ದು ರೋಡ್ ಶೋ ದೃಶ್ಯವನ್ನ ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದ ಛಾಯಾಗ್ರಾಹಕ ಅವಿನಾಶ್ ತೀವ್ರವಾಗಿ ಗಾಯಗೊಂಡಿದ್ದಾರೆ.ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅವಿನಾಶ್‌ ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

--

7 ಆಂಬುಲೆನ್ಸ್ ಗಳ ಚಾಲಕರು, ಮಾಲೀಕರ ಮೇಲೆ ಎಫ್ಐಆರ್ಚಿಕ್ಕಮಗಳೂರು : ಕಳೆದ ರಾತ್ರಿ ಸಿ.ಟಿ. ರವಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ವೇಳೆ ಅದ್ಧೂರಿ ಸ್ವಾಗತ ಮಾಡಿದ ಕಾರ್ಯಕರ್ತರು ಯಡವಟ್ಟು ಮಾಡಿಕೊಂಡಿದ್ದಾರೆ. ಮೆರವಣಿಗೆ ವೇಳೆ ಆಂಬುಲೆನ್ಸ್ ಗಳ ದುರ್ಬಳಕೆ ಮಾಡಿದ ಪರಿಣಾಮ ಕೃಷ್ಣ ಗ್ರೂಪ್ ನ 7 ಆಂಬುಲೆನ್ಸ್ ಗಳ ಚಾಲಕರು, ಮಾಲೀಕರ ಮೇಲೆ ಎಫ್ಐಆರ್ ದಾಖಲಾಗಿದೆ.ಚಿಕ್ಕಮಗಳೂರು ನಗರದಲ್ಲಿ ಮೆರವಣಿಗೆ ಸಾಗಿ ಬರುತ್ತಿದ್ದ ಮಾರ್ಗದಲ್ಲಿ ಆಂಬುಲೆನ್ಸ್ ಗಳ ಟಾಪ್ ಲೈಟ್ ಆನ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ. ಆಂಬುಲೆನ್ಸ್ ನಲ್ಲಿ ರೋಗಿಗಳಿಲ್ಲದಿದ್ದರೂ ಕರ್ಕಶ ಹಾರ್ನ್ ಹಾಕಿ ಜನರಿಗೆ ಭೀತಿ ಹುಟ್ಟಿಸಿದ ಆರೋಪ ಇದೀಗ ಕೇಳಿ ಬಂದಿದೆ.ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಸಾರ್ವಜನಿಕರಿಗೆ ಭಯ ಹುಟ್ಟಿಸಿದ ಆರೋಪ ಇದೀಗ ಆಂಬುಲೆನ್ಸ್ ಗಳ ಮೇಲೆ ದಾಖಲಾಗಿದೆ.ಸಿ.ಟಿ ರವಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರಿಗೆ ಸೇರಿದ ಕೃಷ್ಣ ಆಂಬುಲೆನ್ಸ್ ಮಾಲೀಕ ಬಿಜೆಪಿ ಮುಖಂಡ ಎಂದು ತಿಳಿದು ಬಂದಿದೆ.