ಚಿಕ್ಕಮಗಳೂರುಮೈಸೂರಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪಿಎಚ್‌ಡಿ ಪದವಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮೈಸೂರಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪಿಎಚ್‌ಡಿ ಪದವಿ ಸ್ವೀಕರಿಸಿದರು.

ಮುಕ್ತ ಗಂಗೋತ್ರಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಕೆ.ಜೆ. ಸುರೇಶ್ ಅವರ ಮಾರ್ಗದರ್ಶನದಲ್ಲಿ ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ’ ಒಂದು ಅಧ್ಯಯನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಸಿ.ಟಿ.ರವಿ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.

ಈ ವೇಳೆ ಮಾತನಾಡಿದ ಸಿ.ಟಿ.ರವಿ, ಓದುವುದು ಪ್ರಮುಖ ಆಸಕ್ತಿಯಾಗಿದ್ದು, ಕರ್ನಾಟಕ ರಾಜ್ಯ ಮುಕ್ತ ವಿವಿ ಮುಕ್ತ ಗಂಗೋತ್ರಿ ಯಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಡಾ.ಕೆ.ಜೆ. ಸುರೇಶ್ ಮಾರ್ಗದರ್ಶನದಲ್ಲಿ ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆ ಗಳು ಹಾಗೂ ಸವಾಲುಗಳ ಒಂದು ಅಧ್ಯಯನ ಎಂಬ ಪ್ರಬಂಧವನ್ನು ನಿರಂತರ 4 ವರ್ಷಗಳ ಅಧ್ಯಯನವನ್ನು 2023 ರಲ್ಲಿ ಪೂರ್ಣಗೊಳಿಸಿ, ಮಂಡಿಸಿದೆ.

ಅಧ್ಯಯನ ಸಂದರ್ಭದಲ್ಲಿ ತಿದ್ದಿ, ತೀಡಿ ಅತ್ಯುತ್ತಮ ಮಾರ್ಗದರ್ಶನ ಮಾಡಿದ ಸುರೇಶ್ ಅವರಿಗೆ ಮನಪೂರ್ವಕ ಕೃತಜ್ಞತೆ. ಯುಪಿಎ ಮತ್ತು ಎನ್‌ಡಿಎ ಒಕ್ಕೂಟಗಳ ಮೈತ್ರಿಕೂಟ ಸರ್ಕಾರಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಮಹಾ ಪ್ರಬಂಧ ರಚಿಸಿದ್ದೇನೆ ಎಂದು ವಿವರಿಸಿದರು.

ರಾಜಕೀಯ ಕಾರ್ಯದೊತ್ತಡಗಳ ನಡುವೆ ಪಿಎಚ್‌ಡಿ ಅಧ್ಯಯನ ಕೊಂಚ ನಿಧಾನವಾಗಿತ್ತು. ಆದರೆ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತನಾದ ಬಳಿಕ ಕೊಂಚ ಹೆಚ್ಚಿನ ಸಮಯ ಲಭಿಸಿತು. ಇದನ್ನು ಬಳಸಿಕೊಂಡು, ಅಧ್ಯಯನ ಪೂರ್ಣಗೊಳಿಸಿದೆ ಎಂದು ಹೇಳಿದ್ದಾರೆ.

ಫೋಟೋಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ, ಮುಕ್ತ ಗಂಗೋತ್ರಿಯ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಸಿ. ಟಿ.ರವಿ ಅವರು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಂದ ಪಿಹೆಚ್‌ಡಿ ಪದವಿ ಸ್ವೀಕರಿಸಿದರು.