ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಸಿ.ಟಿ.ಶಂಕರ್ ಅಧ್ಯಕ್ಷರಾಗಿ ಆಯ್ಕೆ

| Published : Mar 30 2025, 03:07 AM IST

ಸಾರಾಂಶ

ಸಂಘದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವ ಜತೆಗೆ ತಮ್ಮ ತಂದೆ ತಾಯಿ ಹೆಸರಿನಲ್ಲಿ ನೂತನ ಸಹಕಾರ ಸಂಘದ ಕಟ್ಟಡ ಗೋದಾಮನ್ನು ತನ್ನ ವೈಯಕ್ತಿಕ ಹಣದಿಂದ ನಿರ್ಮಿಸಿ ಈ ಭಾಗದ ರೈತರ ಋಣ ತೀರಿಸಲು ಮುಂದಾಗಿದ್ದೇನೆ. ಡಿಸೆಂಬರ್ ಅಂತ್ಯದೊಳಗೆ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲು ಕ್ರಮ ವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಸೋಮನಹಳ್ಳಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಉಪಾಧ್ಯಕ್ಷರಾಗಿ ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ಶಂಕರ್, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜುರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಆಶಾ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ಸಂಘದ ನಿರ್ದೇಶಕರನ್ನು ಸ್ಥಳೀಯ ಮುಖಂಡರು ಅಭಿನಂದಿಸಿದರು. ಅಲ್ಲದೇ, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಅಭಿನಂದನೆ ಸ್ವೀಕರಿಸಿದ ನೂತನ ಅಧ್ಯಕ್ಷ ಸಿ.ಟಿ.ಶಂಕರ್ ಮಾತನಾಡಿ, ಕಳೆದ ಮೂರು ಅವಧಿಯಿಂದಲೂ ಸ್ಥಳೀಯ ರೈತರು ಹಾಗೂ ನಿರ್ದೇಶಕರು ತಮ್ಮ ಮೇಲೆ ನಂಬಿಕೆ ಮತ್ತು ವಿಶ್ವಾಸವಿಟ್ಟು ಚುನಾಯಿತರಾಗಿಸುವ ಜತೆಗೆ ಅಧ್ಯಕ್ಷರನ್ನಾಗಿಸಿದ್ದಾರೆ. ಅವರಿಗೆ ಕಪ್ಪುಚುಕ್ಕೆ ಬಾರದಂತೆ ಶ್ರದ್ಧೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.

ಸಂಘದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವ ಜತೆಗೆ ತಮ್ಮ ತಂದೆ ತಾಯಿ ಹೆಸರಿನಲ್ಲಿ ನೂತನ ಸಹಕಾರ ಸಂಘದ ಕಟ್ಟಡ ಗೋದಾಮನ್ನು ತನ್ನ ವೈಯಕ್ತಿಕ ಹಣದಿಂದ ನಿರ್ಮಿಸಿ ಈ ಭಾಗದ ರೈತರ ಋಣ ತೀರಿಸಲು ಮುಂದಾಗಿದ್ದೇನೆ. ಡಿಸೆಂಬರ್ ಅಂತ್ಯದೊಳಗೆ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲು ಕ್ರಮ ವಹಿಸಿರುವುದಾಗಿ ಹೇಳಿದರು.

ಜಿಲ್ಲೆಯಲ್ಲೇ ಸೋಮನಹಳ್ಳಿ ಸಹಕಾರ ಸಂಘ ಸಾಲ ವಿತರಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಸುಮಾರು 10 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ನೀಡುವ ಜತೆಗೆ ವಸೂಲಾತಿಯಲ್ಲೂ ಮುಂದಿದೆ. ವರ್ಷಂಪ್ರತಿ ಆರು ಲಕ್ಷ ಲಾಭಗಳಿಕೆಯತ್ತ ಮುಖ ಮಾಡಿರುವುದಾಗಿ ವಿವರಿಸಿದರು.

ಈ ವೇಳೆ ನಿರ್ದೇಶಕರಾದ ಶಿವಣ್ಣ, ಮಹದೇವ, ಬೋರೇಗೌಡ, ಆನಂದ, ಘಂಟಯ್ಯ, ರಘುನಂದನ್, ಜಯಲಕ್ಷ್ಮಮ್ಮ, ಮಲ್ಲಿಕ್, ಕೆ.ಟಿ.ಪ್ರಕಾಶ್, ಮುಖಂಡರಾದ ಎಸ್.ಎಂ.ರಮೇಶ್, ಎಸ್.ಎಲ್.ಶಂಕರ್, ಲಿಂಗರಾಜು, ಪ್ರೀತಮ್‌ಗೌಡ, ಸಂಘದ ಸಿಇಒ ಆರ್.ಎಸ್.ವಿದ್ಯಾಮಣಿ, ಕೆ.ಜಿ.ಕೃಷ್ಣ ಇತರರಿದ್ದರು.