ಸಾರಾಂಶ
ಹಾನಗಲ್ಲ: ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ಮಾವು ಹಾಗೂ ಇತರ ತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕಗಳನ್ನು (ಆಹಾರ ಉದ್ಯಾನ) ಸಾರ್ವಜನಿಕ - ಖಾಸಗಿ ಸಹಭಾಗಿತ್ವ ಮಾದರಿಯಡಿ ₹35 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಂಪರ್ಕಗಳು ಮತ್ತು ಮೌಲ್ಯವರ್ಧನೆ ಮುಂತಾದ ಕ್ರಮಗಳ ಮೂಲಕ ಕೃಷಿ ಆದಾಯ ಸುಧಾರಿಸಿ, ಆರ್ಥಿಕ ಅಭಿವೃದ್ಧಿ ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಾವು ಹಾಗೂ ಇತರ ತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕಗಳು ಸಹಕಾರಿಯಾಗಲಿವೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಡಿಯಲ್ಲಿ ಈ ಘಟಕಗಳು ಕಾರ್ಯ ನಿರ್ವಹಿಸಲಿವೆ ಎಂದು ಶ್ರೀನಿವಾಸ ಮಾನೆ ಮಾಹಿತಿ ನೀಡಿದ್ದಾರೆ.ಘಟಕಗಳಿಂದ ನೇರ ಮತ್ತು ಪರೋಕ್ಷವಾಗಿ ಸುಮಾರು 600-700 ಜನರಿಗೆ ಉದ್ಯೋಗಾವಕಾಶ ಒದಗಿಸುವ ನಿರೀಕ್ಷೆ ಹೊಂದಲಾಗಿದೆ. ಘಟಕಗಳ ಸ್ಥಾಪನೆಗೆ ಈಗಾಗಲೇ 28.3 ಎಕರೆ ಭೂಮಿ ದೊರಕಿಸಲಾಗಿದ್ದು, ಬಹು ಹಣ್ಣು, ತರಕಾರಿ ಮತ್ತು ಸಂಬಾರ ಘಟಕಗಳು, ಮೆಕ್ಕೆಜೋಳ, ಬಹುಧಾನ್ಯ ಸಂಸ್ಕರಣ ಘಟಕಗಳು, ಜೈವಿಕ ಇಂಧನಗಳ ಮತ್ತು ಮಿಶ್ರಣಕ್ಕಾಗಿ ಜೈವಿಕ ಎಥೆನಾಲ್ ಘಟಕಗಳ ಸ್ಥಾಪನೆಯ ಉದ್ದೇಶ ಹೊಂದಲಾಗಿದೆ. ಈ ಘಟಕಗಳ ಸ್ಥಾಪನೆಯಿಂದ ಸುತ್ತಲಿನ 100 ಕಿ.ಮೀ. ವ್ಯಾಪ್ತಿಯ ಮುಂಡಗೋಡ, ಯಲ್ಲಾಪುರ, ಸಿದ್ದಾಪುರ, ಕಲಘಟಗಿ, ಹುಬ್ಬಳ್ಳಿ, ಕುಂದಗೋಳ, ಧಾರವಾಡ, ನವಲಗುಂದ, ಸೊರಬ, ಶಿಕಾರಿಪುರ, ಸಾಗರ, ಶಿರಹಟ್ಟಿ, ಅಣ್ಣಿಗೇರಿ ಸೇರಿದಂತೆ ಸುಮಾರು 22 ತಾಲೂಕುಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಮಾನೆ ವಿವರಿಸಿದ್ದಾರೆ.
ಕ್ಲಸ್ಟರ್ ಮಾದರಿಯ ಈ ಘಟಕಗಳ ಸ್ಥಾಪನೆಯಿಂದ ರೈತರಿಗೆ ತಾವು ಬೆಳೆಯುವ ಮಾವು, ಬಾಳೆ, ಫೈನಾಪಲ್, ಕಲ್ಲಂಗಡಿ, ಪಪ್ಪಾಯ, ಈರುಳ್ಳಿ, ಟೊಮ್ಯಾಟೊ, ಹಸಿ ಮೆಣಸಿನಕಾಯಿ, ಕ್ಯಾಬೀಜ, ಆಲೂಗಡ್ಡೆ, ಶುಂಠಿ, ಒಣ ಮೆಣಸಿನಕಾಯಿ, ಪೆಪ್ಪರ್, ವೀಳ್ಯದೆಲೆ, ಬೆಳ್ಳುಳ್ಳಿ, ಅಡಕೆ, ತೆಂಗು, ಚೆಂಡು ಹೂವು, ಸುಗಂಧರಾಜ, ಸೇವಂತಿಗೆ, ಮಲ್ಲಿಗೆ, ಭತ್ತ, ಜೋಳ, ಶೇಂಗಾ, ಎಣ್ಣೆಕಾಳು, ಕಬ್ಬು ಹೀಗೆ ವಿವಿಧ ಬಗೆಯ ಹಣ್ಣು, ತರಕಾರಿ, ಸಂಬಾರ, ತೋಟಗಾರಿಕೆ, ಹೂವು ಮತ್ತು ಕೃಷಿ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸಿಗಲಿದೆ. ಇಂಥ ಮಹತ್ವಾಕಾಂಕ್ಷೆಯ ಘಟಕಗಳ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.