ಸಾರಾಂಶ
ಗದಗ: ಸಚಿವ ಸಂಪುಟ ವಿಸ್ತರಣೆಯಂತ ಮಹತ್ವದ ವಿಷಯವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಇನ್ನೂ ಹಲವಾರು ಮಹತ್ವದ ವಿಷಯಗಳು ಚರ್ಚೆಯಾಗಬೇಕು, ಆದರೆ ಆಗುತ್ತಿಲ್ಲ. ನೋಡಿ, ರೈಲ್ವೆ ನಿಲ್ದಾಣದ ದುರಂತದಲ್ಲಿ 18 ಜನ ಅಸುನೀಗಿದ್ದಾರೆ. ಕುಂಭಮೇಳದಲ್ಲಿ ಎಷ್ಟು ಜನ ತೀರಿಕೊಂಡರು ಅದರ ಬಗ್ಗೆಯೂ ಚರ್ಚೆಯಾಗಬೇಕು. ಆದರೆ ಅದ್ಯಾವುದು ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ಬಜೆಟ್ ಬಗ್ಗೆಯೂ ಚರ್ಚೆಯಾಗಬೇಕು ಅದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಡಿಸಿಎಂ ಡಿಕೆಶಿ, ಸಚಿವ ರಾಜಣ್ಣ ಮಧ್ಯೆ ಟಾಕ್ ವಾರ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದುರ್ಬಳಕೆ ಹೇಳಿಕೆ ನೀಡಿದವರನ್ನೇ ಕೇಳಿ ಅವರೇ ಉತ್ತರಿಸುತ್ತಾರೆ. ಪರ, ವಿರೋಧ ಇದರ ಬಗ್ಗೆ ನನ್ನ ಬಳಿ ಉತ್ತರ ಇಲ್ಲ ಎಂದರು.ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುತ್ತಾರಾ? ಎಂಬ ಪ್ರಶ್ನೆಗೆ ಸಚಿವರು ಮರು ಪ್ರಶ್ನೆ ಮಾಡಿ ದೇಶದ ಪ್ರಧಾನಿ ಮುಂದಿನ 5 ವರ್ಷ ಮುಂದುವರೆಯುತ್ತಾರಾ? ನೀವೇ ಹೇಳಿ ನೋಡೋಣ. ಮುಂದಿನ ಪಿಎಂ ಚಂದ್ರಬಾಬು ನಾಯ್ಡು ಆಗಬಹುದು ಅಂತಾ ನನಗೆ ಅನ್ನಿಸುತ್ತಿದೆ. ನಿತಿನ್ ಗಡ್ಕರಿ ಅವರಿಗೆ ಅವಕಾಶ ಮಾಡಿಕೊಡಿ ಅಂತಾ ಬಿಜೆಪಿ ಕಾರ್ಯಕರ್ತರು, ಮುಖಂಡರಲ್ಲಿ ಮನವಿ ಮಾಡುತ್ತೇನೆ ಎಂದರು.ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಸಚಿವ ನಿತಿನ್ ಗಡ್ಕರಿ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ವ್ಯಂಗ್ಯವಾಗಿಯೇ ಉತ್ತರಿಸಿದರು.ದೇಶದ ಆರ್ಥಿಕ ಪರಿಸ್ಥಿತಿ ನೋಡಿದರೆ ದಿವಾಳಿ ಎದ್ದು ಹೋಗಿದೆ ಎಂದು ಕೇಂದ್ರ ಸರ್ಕಾರದ ಆಡಳಿತವನ್ನು ಟೀಕಿಸಿದರು.ವಿಶ್ವವಿದ್ಯಾಲಯ ಬಂದ್ ಮಾಡುವ ಸರ್ಕಾರದ ನಿರ್ಧಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಲಾಡ್ ಅವರು, ನಾನು ಆ ಇಲಾಖೆಯ ಸಚಿವ ಅಲ್ಲ, ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಆದರೆ ಒಂದು ವಿಶ್ವವಿದ್ಯಾಲಯ ನಡೆಸಲು ಸಾಕಷ್ಟು ದುಡ್ಡು ಬೇಕು. ಕೇವಲ ಎರಡು ಕೋಟಿ ಇಟ್ಟು ವಿಶ್ವವಿದ್ಯಾಲಯ ಪ್ರಾರಂಭ ಮಾಡಿದರು. ಅಷ್ಟರಲ್ಲಿ ವಿವಿ ನಡೆಸಲು ಹೇಗೆ ಸಾಧ್ಯ? ನೀವೇ ಹೇಳಿ. ಹಣ ಇಲ್ಲದೇ ಯೂನಿವರ್ಸಿಟಿ ಬಂದ್ ಮಾಡಿದರು ಅಂತಾ ಟೀಕೆ ಮಾಡುತ್ತಾರೆ. ನನ್ನ ಪ್ರಕಾರ ಒತ್ತಡ ನಿಭಾಯಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಿಸುತ್ತದೆ ಎಂದರು.ಕಾಂಗ್ರೆಸ್ಸಿನ ಗ್ಯಾರಂಟಿಗಳನ್ನು ಟೀಕಿಸಿದ್ದ ಬಿಜೆಪಿ ನಮ್ಮ ಮಾದರಿಯಲ್ಲೇ ಗ್ಯಾರಂಟಿ ಕೊಡುತ್ತಿದೆಯಲ್ಲ ಇದಕ್ಕೆ ಏನು ಹೇಳುತ್ತಾರೆ. 12 ಲಕ್ಷ ರು. ವರೆಗೆ ಆದಾಯ ತೆರಿಗೆ ಫ್ರೀ ಮಾಡಿದ್ದಾರೆ, ಇದು ಬರ್ಡನ್ ಅಲ್ವಾ? ಕಾರ್ಪೊರೇಟ್ ಟ್ಯಾಕ್ಸ್ ಪ್ರಯೋಜನದಿಂದಾಗಿ 1.5 ಲಕ್ಷ ಕೋಟಿ ಲಾಸ್ ಇದೆ. ಇದರ ಬಗ್ಗೆ ಯಾಕೆ ಮಾತಾಡಲ್ಲ. ಕೇಂದ್ರ ಸರ್ಕಾರ ಜಿಎಸ್‌ಟಿ ಯಾಕೆ ಕಡಿಮೆ ಮಾಡಬಾರದು ಎಂದು ಪ್ರಶ್ನಿಸಿದರು.ಈ ವೇಳೆ ರೋಣ ಶಾಸಕ ಜಿ.ಎಸ್. ಪಾಟೀಲ, ಅನಿಲಕುಮಾರ ಪಾಟೀಲ, ಬಿ.ಬಿ. ಅಸೂಟಿ, ಯುವ ಕಾಂಗ್ರೆಸ್ ಮುಖಂಡ ಕೃಷ್ಣಗೌಡ ಪಾಟೀಲ ಮುಂತಾದವರು ಹಾಜರಿದ್ದರು.